ಹುಬ್ಬಳ್ಳಿ : ಬಿಜೆಪಿಯವರು ತಾವಾಗಿಯೇ ಕರೆಯುವವರೆಗೆ ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಮರಳಿ ಬಿಜೆಪಿಗೆ ಕರೆಯಿಸಿಕೊಳ್ಳಬೇಕೆಂಬ ಒಲವು ಹೆಚ್ಚುತ್ತಿದೆ. ಬೇಕೆಂದರೆ ಪಕ್ಷದ ಹೈಕಮಾಂಡ್ ಎಲ್ಲ ಶಾಸಕರನ್ನು ಕರೆಯಿಸಿ ಮಾತನಾಡಲಿ. ನನ್ನ ಬಗ್ಗೆ ಅವರಿಗೆ ಇರುವ ಒಲವು ಗೊತ್ತಾಗುತ್ತದೆ. ಆದರೆ, ಧಾರವಾಡ ಜಿಲ್ಲೆಯವರು ನನ್ನ ಬಗ್ಗೆ ಮೌನ ತಾಳಿದ್ದಾರೆ ಎಂದರು.
ಹಿಂದುತ್ವದ ಕಾರಣಕ್ಕಾಗಿ ನನ್ನ ಕ್ರೇಜ್ ಹೆಚ್ಚಾಗಿದೆ. ಹಿಂದುತ್ವ ಉಳಿಯಬೇಕೆಂದರೆ ಯತ್ನಾಳ ಬೇಕೆಂದು ಜನರು ಹೇಳುತ್ತಿದ್ದಾರೆ ಎಂದರು.
ಯಾವುದೇ ಕಾರಣಕ್ಕೂ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ, ಬದಲಾಗಿ ರಾಜ್ಯದಲ್ಲಿಯೇ ಇರುತ್ತೇನೆ. ಬೇಕಾದರೆ ಬಿ.ವೈ. ವಿಜಯೇಂದ್ರ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲಿ ಎಂದು ಹೇಳಿದರು.
ಕುರುಬರಿಗೆ ಎಸ್ಟಿ ಮೀಸಲಾತಿ ಕೊಟ್ಟರೆ ಯಾವುದೇ ತಪು್ಪ ಇಲ್ಲ. ಆದರೆ, ಮುಸ್ಲಿಂರಿಗೆ ನೀಡಿರುವ ಮೀಸಲಾತಿ ವಾಪಸ್ಸು ಪಡೆಯಲಿ. ಮುಸ್ಲಿಂರ ಮೀಸಲಾತಿ ತೆಗೆದು ಅದನ್ನು ಎಲ್ಲ ಜಾತಿಯವರಿಗೆ ಸಮಾನವಾಗಿ ಹಂಚಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.