ಮೈಸೂರು: ಹಿರಿಯ ರಾಜಕಾರಣಿ, ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಭಾನುವಾರ ತಮ್ಮ ಚುನಾವಣಾ ರಾಜಕೀಯಕ್ಕೆ ಪೂರ್ಣವಿರಾಮ ಹಾಕಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದರು.
ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂಸದ ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭ’ದಲ್ಲಿ ಈ ವಿಷಯವನ್ನು ಪ್ರಕಟಿಸಿದರು. ‘ನಾನು ಮತ್ತೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿ.ಶ್ರೀನಿವಾಸಪ್ರಸಾದ್ ಅವರು, 1974ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದೆ. 2024ರ ಮಾರ್ಚ್ 17ಕ್ಕೆ 50 ವರ್ಷವಾಯಿತು. ಚುನಾವಣಾ ರಾಜಕೀಯ ತೃಪ್ತಿ ನೀಡಿದ್ದು, ರಾಜಕೀಯ ಸಾಕು ಎನಿಸಿದೆ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಮಾಡಿದ್ದೇನೆ ಎಂದು ಭಾವುಕರಾಗಿ ಹೇಳಿದರು.
1974ರ ಮಾರ್ಚ್ 17ರಿಂದ 2014ರ ಲೋಕಸಭಾ ಚುನಾವಣೆವರೆಗೆ ಎದುರಿಸಿದ 14 ಚುನಾವಣೆಗಳನ್ನು ಸ್ಮರಿಸಿದ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ನೆರವಾದವರಿಗೆ ಕೃತಜ್ಞತೆ ಸಲ್ಲಿಸಿ, ರಾಜಕೀಯ ಎದುರಾಳಿಗಳ ವಿರುದ್ಧ ಗುಡುಗಿದರು.
6 ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯ ಪಡೆದು 27 ವರ್ಷಗಳ ಸಂಸತ್ ಸದಸ್ಯನಾಗಿ ದೆಹಲಿಯಲ್ಲಿ ಕೆಲಸ ಮಾಡಿದ್ದೇನೆ. 7 ಪ್ರಧಾನಿಗಳ ಆಡಳಿತ ನೋಡಿದ್ದು, ಇಂದಿರಾ ಗಾಂಧಿ, ಮುರಾರ್ಜಿ ದೇಸಾಯಿ, ಚರಣ್ ಸಿಂಗ್, ರಾಜೀವ್‌ಗಾಂಧಿ, ಚಂದ್ರಶೇಖರ್, ಪಿ.ವಿ.ನರಸಿಂಹರಾವ್ ಸೇರಿ ನರೇಂದ್ರ ಮೋದಿ ಆಡಳಿತದಲ್ಲೂ ಸಂಸದನಾಗಿ ಕಾರ್ಯನಿರ್ವಹಿಸಿದ್ದು, ಈ ಪ್ರಧಾನಿಗಳ ವ್ಯಕ್ತಿತ್ವ, ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿರುವೆ. ಮುಂದಿನ ದಿನಗಳಲ್ಲಿ ಇವರ ಬಗ್ಗೆ ಪುಸ್ತಕ ಬರೆಯುವ ಆಲೋಚನೆ ಇದೆ ಎಂದರು.
ನಾನು ಎದುರಿಸಿದ ಚುನಾವಣೆಗಳನ್ನು ಸ್ಮರಿಸಿಕೊಂಡರೆ ಮೈಜುಮ್ ಅನ್ನುತ್ತದೆ. ಆರಂಭದ ಚುನಾವಣೆಗಳಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡಿರಲಿಲ್ಲ. ದುಡಿಯುವ ಮನೋಸ್ಥೈರ್ಯ ಇತ್ತು. ಸಂಸದರು ಹಳ್ಳಿಗಳಿಗೆ ಹೋಗುತ್ತಿರಲಿಲ್ಲ. ನಾನು ತನ್ನ ಕ್ಷೇತ್ರದ ಪ್ರತಿ ಹಳ್ಳಿಗೆ ಭೇಟಿ ನೀಡಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ಹೇಳಿದರು.
ಯಾವುದೇ ಪಕ್ಷದಲ್ಲಿದ್ದರೂ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸಿಕೊಳ್ಳಲಿಲ್ಲ. ಯಾವ ಪಕ್ಷದಲ್ಲಿದ್ದರೂ ನಿಷ್ಠೆಯಾಗಿದ್ದೇನೆ. ಯಾರಿಗೂ ಹೊರೆಯಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಪರ ವಿರೋಧ ಇರುತ್ತದೆ. ಆದರೆ ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ನನ್ನನ್ನು ಮುಗಿಸುವ, ತುಳಿಯುವ ಪ್ರಯತ್ನ ಮಾಡಿದ್ದಾರೆ. ನನಗೆ ತೊಂದರೆಯನ್ನೂ ಕೊಟ್ಟರು. ಅವರಿಗೆ ರಾಜಕೀಯವಾಗಿ ತಕ್ಕ ಪಾಠವನ್ನೂ ಕಲಿಸಿರುವೆ. ರಾಜಕೀಯ ಎದುರಾಳಿಗಳಿಗೆ ತಲೆಯೂ ಬಾಗಿಲ್ಲ. ಅವರಿಗೆ ಶರಣಾಗಿಲ್ಲ. ಒಳ್ಳೆಯವರಿಗೆ ಒಳ್ಳೆಯವನು. ಕೆಟ್ಟವರಿಗೆ ಬಹಳ ಕೆಟ್ಟವನಾಗಿದ್ದೇನೆ ಎಂದು ಗುಡುಗಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಗ್ರಂಥ ಬಿಡುಗಡೆ ಮಾಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಕೃತಿ ಕುರಿತು ಮಾತನಾಡಿದರು. ಸಾಹಿತಿ ಡಾ.ಪ್ರಧಾನ ಗುರುದತ್ತ, ಅಭಿನಂದನಾ ಸಮಿತಿ ಅಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಇನ್ನಿತರರಿದ್ದರು