ಜಿಲ್ಲೆ

ಪುತ್ರನಿಗೆ ಟಿಕೆಟ್ ಗಿಟ್ಟಿಸಲು ಯಶಸ್ವಿಯಾಗುವರೇ ಎಚ್‌ಸಿಎಂ?

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಾದರೂ ತಮ್ಮ ಪುತ್ರ ಸುನೀಲ್ ಬೋಸ್‌ಗೆ ಚುನಾವಣಾ ರಾಜಕೀಯ ರಂಗ ಪ್ರವೇಶ ಕಲ್ಪಿಸುವಲ್ಲಿ ಯಶಸ್ವಿಯಾಗುವರೇ?

2024ರ ಲೋಕಸಭಾ ಚುನಾವಣೆಯ ಕಣ ಈಗಾಗಲೇ ರಂಗೇರುತ್ತಿದ್ದು, ಪ್ರಮುಖವಾಗಿ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ತಿ.ನರಸೀಪುರ ಹಾಗೂ ನಂಜನಗೂಡು ಕ್ಷೇತ್ರಗಳ ಟಿಕೆಟ್ ಪಡೆದು, ಪುತ್ರ ಸುನೀಲ್ ಬೋಸ್ ಹಾಗೂ ತಾನು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂದು ಡಾ.ಎಚ್.ಸಿ.ಮಹದೇವಪ್ಪ ಬಯಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಇದೀಗ ಲೋಕಸಭಾ ಚುನಾವಣೆ ಎದುರಾಗಿದ್ದು, ತಮ್ಮ ಪುತ್ರನಿಗೆ ರಾಜಕೀಯ ಭವಿಷ್ಯ ರೂಪಿಸಲು ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತೆ ಪ್ರಯತ್ನ ಪ್ರಾರಂಭಿಸಿದ್ದಾರೆ. ಆದರೆ, ಅವರ ಕನಸಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಸಚಿವ ಬಿ.ಸೋಮಶೇಖರ್ ಹಾಗೂ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅಡ್ಡಿಯಾಗುವರೇ ಎಂಬುದನ್ನು ಕಾದುನೋಡಬೇಕಾಗಿದೆ.

ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಾದ ಸಿದ್ದರಾಮಯ್ಯ, ಜಿ.ಟಿ.ದೇವೇಗೌಡ ಹಾಗೂ ಡಾ.ಎಚ್.ಸಿ.ಮಹದೇವಪ್ಪ ತಮ್ಮ ಜತೆಗೆ ತಮ್ಮ ಪುತ್ರರಿಗೂ ಚುನಾವಣಾ ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ ಕಲ್ಪಿಸಿಕೊಡಲು 2018ರ ಚುನಾವಣೆಯಲ್ಲೇ ಮುಂದಾಗಿದ್ದರು. ಆದರೆ, ಈ ಪೈಕಿ ಸಿದ್ದರಾಮಯ್ಯ ಮಾತ್ರ ಯಶಸ್ವಿಯಾಗಿದ್ದರು. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದರ ಜತೆಗೆ, ತಮ್ಮ ಪುತ್ರ ಡಾ.ಯತೀಂದ್ರ ಅವರಿಗೆ ವರುಣ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಅಲ್ಲದೆ, ಪುತ್ರನನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದು ಇತಿಹಾಸ.

ಇತ್ತ ಪುತ್ರ ಜಿ.ಡಿ.ಹರೀಶ್‌ಗೌಡ ಅವರ ರಾಜಕೀಯ ಭವಿಷ್ಯ ರೂಪಿಸಲು ಜಿ.ಟಿ.ದೇವೇಗೌಡ 2018ರ ಚುನಾವಣೆಯಲ್ಲೇ ಮುಂದಾಗಿದ್ದರು. ಅದಕ್ಕಾಗಿ ಹುಣಸೂರು ಕ್ಷೇತ್ರದಲ್ಲಿ ಸಿದ್ಧತೆ ನಡೆಸಿದ್ದರು. ಆದರೆ, ಜೆಡಿಎಸ್‌ನಲ್ಲಿ ಅಂದು ನಡೆದ ರಾಜಕೀಯ ಬದಲಾವಣೆಯಿಂದಾಗಿ ಆ ಪ್ರಯತ್ನವನ್ನು ಮುಂದೂಡಿದ್ದರೂ 2023ರ ಚುನಾವಣೆಯಲ್ಲಿ ಜಿ.ಡಿ.ಹರೀಶ್‌ಗೌಡರಿಗೆ ಹುಣಸೂರು ಟಿಕೆಟ್ ಪಡೆದರು. ಜತೆಗೆ, ಪುತ್ರನನ್ನು ಗೆಲ್ಲಿಸಿ ಶಾಸಕರನ್ನಾಗಿಯೂ ಮಾಡಿದ್ದಾರೆ. ಇದೇ ನಿಟ್ಟಿನಲ್ಲಿ ಪ್ರಯತ್ನಿಸಿ ವಿಫಲರಾಗಿದ್ದ ಎಚ್.ಸಿ.ಮಹದೇವಪ್ಪ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಪ್ರಯತ್ನಿಸುತ್ತಿದ್ದಾರೆ.

ತಿ.ನರಸೀಪುರ ಸೇರಿದಂತೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ನಂಜನಗೂಡು, ವರುಣ ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತವೆ. ಇದರೊಂದಿಗೆ ಚಾಮರಾಜನಗರ ಜಿಲ್ಲೆಯ ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ಕ್ಷೇತ್ರಗಳೂ ಸೇರಿವೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್, ಹನೂರಿನಲ್ಲಿ ಮಾತ್ರ ಜೆಡಿಎಸ್ ಗೆದ್ದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್.ಧ್ರುವನಾರಾಯಣ ಅವರ ವಿರುದ್ಧ ಗೆಲುವು ಪಡೆದಿದ್ದರು. ಆ ವೇಳೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿ ಶಾಸಕರಿದ್ದರೆ, ಜೆಡಿಎಸ್ ಮತ್ತು ಬಿಎಸ್‌ಪಿ ತಲಾ ಒಂದು ಕ್ಷೇತ್ರಗಳಲ್ಲಿ ಗೆದ್ದಿದ್ದವು.

ಪ್ರಯತ್ನ ಫಲ ಕೊಡುವುದೇ?:

ಪುತ್ರ ಸುನೀಲ್ ಬೋಸ್ ಯಾವುದೇ ತೊಂದರೆ ಇಲ್ಲದೆ ಚುನಾವಣೆಯಲ್ಲಿ ಗೆದ್ದು ಉಜ್ವಲ ರಾಜಕೀಯ ಭವಿಷ್ಯ ಪಡೆಯಬೇಕು ಎಂಬ ಉದ್ದೇಶದಿಂದ 2018ರಲ್ಲೇ ಎಚ್.ಸಿ.ಮಹದೇವಪ್ಪ ಕ್ಷೇತ್ರ ತ್ಯಾಗಕ್ಕೂ ಮುಂದಾಗಿದ್ದರು. ತಿ.ನರಸೀಪುರ ಕ್ಷೇತ್ರವನ್ನು ಸುನೀಲ್ ಬೋಸ್‌ಗೆ ಬಿಟ್ಟುಕೊಟ್ಟು ನಂಜನಗೂಡು ಕ್ಷೇತ್ರದತ್ತ ಹೋಗಲು ಸಿದ್ಧವಾಗಿದ್ದರು. ಆದರೆ, ಅಂದಿನ ಕೆಲ ರಾಜಕೀಯ ಬದಲಾವಣೆಗಳಿಂದ ಅದು ಸಾಧ್ಯವಾಗಲಿಲ್ಲ. ಕಡೆಗೆ ತಾವೇ ತಿ.ನರಸೀಪುರದಿಂದ ಸ್ಪರ್ಧಿಸಿದ್ದರು. ಮತ್ತೆ 2023ರ ಚುನಾವಣೆಯಲ್ಲೂ ಅದೇ ಪ್ರಯತ್ನ ಮುಂದುವರಿಸಿದರೂ ಯಶಸ್ವಿಯಾಗಲಿಲ್ಲ. ಇದೀಗ ಲೋಕಸಭಾ ಚುನಾವಣೆಯಲ್ಲಾದರೂ ಚಾಮರಾಜನಗರ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೊಡಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಈ ಸಂಬಂಧ ಈಗಾಗಲೇ ಒಳಗೊಳಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಹೇಳಿಕೆಯನ್ನೂ ನೀಡಿದ್ದಾರೆ.

ಈ ನಡುವೆ, ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 15 ವರ್ಷಗಳಿಂದ ಗುರುತಿಸಿಕೊಂಡಿರುವ ಸುನೀಲ್ ಬೋಸ್ ಕಳೆದ 6 ತಿಂಗಳಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯಕರ್ತರ ಜತೆ ಬೆರೆತು, ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಮಹದೇವಪ್ಪ ಕೂಡ ನಂಜನಗೂಡು ಕ್ಷೇತ್ರ ವ್ಯಾಪ್ತಿಯ ಬೆಂಬಲಿಗರನ್ನು ಕರೆದು ಅನೇಕ ಸಭೆಗಳನ್ನು ನಡೆಸಿದ್ದಾರೆ.

ಕ್ಷೇತ್ರದ ಟಿಕೆಟ್ ನಿರ್ಧಾರ ಹೈಕಮಾಂಡ್ ಅಂಗಳದಲ್ಲಿದೆ. ಸುನೀಲ್ ಬೋಸ್, ಪುಷ್ಪಾ ಅಮರ್‌ನಾಥ್, ಕಾಗಲವಾಡಿ ಶಿವಣ್ಣ, ಬಿ.ಸೋಮಶೇಖರ್, ಜಿ.ಎನ್.ನಂಜುಂಡಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದೆ. ಇದಲ್ಲದೆ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಅವರನ್ನು ಲೋಕಸಭೆಗೆ ಕಳುಹಿಸಬೇಕು ಎಂಬ ಚರ್ಚೆಯೂ ನಡೆದಿದೆ.

ಇಷ್ಟು ಜನರಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ? ಈ ಪ್ರಯತ್ನದಲ್ಲಿ ಮಹದೇವಪ್ಪ ಯಶಸ್ವಿಯಾಗುವರೇ? ಇಲ್ಲವೇ ಮತ್ತೆ ನಿರಾಸೆ ಅನುಭವಿಸುವರೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಸುನೀಲ್ ಬೋಸ್ ನಂಜನಗೂಡು ಉಪ ಚುನಾವಣೆಯಲ್ಲೇ ಅಭ್ಯರ್ಥಿ ಆಗಬೇಕಿತ್ತು. ಆಗಿನಿಂದಲೇ ಅವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮೂರು ಚುನಾವಣೆಗಳಲ್ಲಿ ಟಿಕೆಟ್ ಸಿಕ್ಕಿಲ್ಲ. ಆದರೂ ಮುನಿಸಿಕೊಳ್ಳದೆ ಪಕ್ಷದ ಪರ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪಕ್ಷದ ಸದಸ್ಯತ್ವವೇ ಪಡೆಯದವರು ಶಾಸಕರಾಗಿರುವ ಸಂದರ್ಭದಲ್ಲಿ ನನ್ನ ಮಗನ ಪಕ್ಷ ಸಂಘಟನೆಯ ಕಾರ್ಯ ಗುರುತಿಸಿ ಏಕೆ ಲೋಕಸಭೆ ಚುನಾವಣೆಗೆ ಅವಕಾಶ ನೀಡಬಾರದು?ಡಾ.ಎಚ್.ಸಿ.ಮಹದೇವಪ್ಪ, ಸಚಿವ