ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸಾರಿಗೆ ನೌಕರರ ವೇತನ ಪರಿಷ್ಕರಣೆ, ಇನ್ನಿತರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಮನವೊಲಿಸಲು ಮತ್ತೊಮ್ಮೆ ಪ್ರಯತ್ನ ನಡೆಸಲಾಗುವುದು ಎಂದು ವಾಕರಸಾ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.
ಹುಬ್ಬಳ್ಳಿಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಿದ್ಯಾ ಸಹಾಯ ನಿಧಿ-ವಿದ್ಯಾ ಸ್ಪೂರ್ತಿ ತಂತ್ರಾಂಶ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನೌಕರರ ಸಂಘಟನೆ ಹಾಗೂ ಸರ್ಕಾರದ ನಡುವೆ ಮಾತುಕತೆ ಯಶಸ್ವಿಯಾಗಲಿಲ್ಲ. ಹಣಕಾಸು ಸ್ಥಿತಿಗತಿಗಳನ್ನು ನೋಡಿಕೊಂಡು ಮುಂದುವರಿಯಬೇಕಾಗುತ್ತದೆ. ಬೇಡಿಕೆಗಳ ಬಗ್ಗೆ ನೌಕರರ ಸಂಘದವರು ಎರಡು ಹೆಜ್ಜೆ ಹಿಂದೆ ಸರಿಯಬೇಕು ಹಾಗೂ ಸರ್ಕಾರ ಎರಡು ಹೆಜ್ಜೆ ಮುಂದಿಡಬೇಕು. ಹಾಗಾದಾಗ ಸಮಸ್ಯೆ ಬಗೆಹರಿಯುತ್ತದೆ ಎಂದು ಅಭಿಪ್ರಾಯಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಮಾತನಾಡಿ, ವೃತ್ತಿಪರ ಕೋರ್ಸ್ಗಳಲ್ಲಿ ಅಭ್ಯಸಿಸುವ ಸಂಸ್ಥೆಯ ನೌಕರರ ಮಕ್ಕಳಿಗೆ ವಿದ್ಯಾ ಸಹಾಯ ನಿಧಿಯಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳೀಕೃತಗೊಳಿಸಿ ವಿದ್ಯಾ ಸ್ಪೂರ್ತಿ ತಂತ್ರಾಂಶ ಸಿದ್ಧಪಡಿಸಲಾಗಿದೆ. ಇದರಿಂದ ತ್ವರಿತಗತಿಯಲ್ಲಿ ವಿದ್ಯಾರ್ಥಿ ವೇತನ ಪಾವತಿಸಲು ಅನುಕೂಲವಾಗಲಿದೆ ಎಂದರು.
ಸಂಸ್ಥೆಯ 22 ಸಾವಿರ ನೌಕರರಲ್ಲಿ ಸುಮಾರು 300 ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುತ್ತಿರುವುದು ಕಡಿಮೆ ಎಂಬುದನ್ನು ಮನಗಂಡು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ನೌಕರರ ಮಕ್ಕಳು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಹೊಸ ತಂತ್ರಾಂಶ ರೂಪಿಸಲಾಗಿದೆ. ಪ್ರತಿ ವರ್ಷ ಐಟಿಐ ವಿದ್ಯಾರ್ಥಿಗಳಿಗೆ 5500 ರೂ., ಡಿಪ್ಲೊಮಾ ಎನ್ಟಿಟಿಎಫ್, ಜಿಟಿಟಿಸಿ, ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ 6000 ರೂ. ಹಾಗೂ ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಚ್ಎಂಎಸ್, ವೆಟರನರಿ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾ ಸಹಾಯ ನಿಧಿಗೆ ನೌಕರರ ಹಾಗೂ ಸಂಸ್ಥೆಯ ವಂತಿಗೆಯನ್ನು ಹೆಚ್ಚಿಸಿ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಬಹುದಾಗಿದೆ ಎಂದು ಹೇಳಿದರು.
ಆಗಸ್ಟ್ ತಿಂಗಳಲ್ಲಿ ಯುಪಿಐ ವಹಿವಾಟಿನಲ್ಲಿ ಹೆಚ್ಚಿನ ಸಾಧನೆ ಮಾಡಿದ ವಿಭಾಗ, ಘಟಕ, ಸಿಬ್ಬಂದಿಗೆ ಪುರಸ್ಕಾರ ಹಾಗೂ ಪ್ರಶಂಸಾ ಪತ್ರ ನೀಡಲಾಯಿತು.
ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಸ್ವಾಗತಿಸಿದರು. ಎನ್.ಜೆ. ನಾಯ್ಕರ್ ಪ್ರಾರ್ಥನೆ ಹಾಡಿದರು. ಮುಖ್ಯ ಕಾರ್ವಿುಕ ಕಲ್ಯಾಣ ಅಧಿಕಾರಿ ಶ್ರೀನಿವಾಸಮೂರ್ತಿ, ಮುಖ್ಯ ತಾಂತ್ರಿಕ ಶಿಲ್ಪಿ ಸಿದ್ದೇಶ್ವರ ಹೆಬ್ಬಾಳ, ಮುಖ್ಯ ಲೆಕ್ಕಾಧಿಕಾರಿ ಜಗದಂಬಾ ಕೋಪರ್ಡೆ, ಉಗ್ರಾಣ ಮತ್ತು ಖರೀದಿ ನಿಯಂತ್ರಕ ಐ.ಎಂ. ಕಂದಗಲ್, ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಗಣೇಶ ರಾಥೋಡ್, ಇತರರು ಇದ್ದರು.