ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ  
ಜಿಲ್ಲೆ

ವರುಣದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ?

ಮೈಸೂರು: ನನ್ನ ರಾಜಕೀಯ ಬೆಳವಣಿಗೆಯಲ್ಲಿ ವರುಣ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣ ಕ್ಷೇತ್ರವೇ ನನ್ನನ್ನು ರಾಜ್ಯಕ್ಕೆ ಪರಿಚಯಿಸಿದೆ. ವರುಣದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಯವೇ ಉತ್ತರ ಕೊಡುತ್ತದೆ, ಕಾದು ನೋಡಿ ಎಂದರು.

ಮೈಸೂರು ರಾಜಮನೆತನದ ಕುರಿತು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ವಿಜಯೇಂದ್ರ ಖಂಡಿಸಿದರು. ಯದುವಂಶಸ್ಥರನ್ನು ಅಪಮಾನಿಸುವುದು ಸರಿಯಲ್ಲ. ಈ ರೀತಿಯ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧ. ಇದು ಉದ್ಧಟತನ ಮತ್ತು ಅವಿವೇಕತನದ ಹೇಳಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರು ಈ ಕೂಡಲೇ ಕ್ಷಮೆ ಕೇಳಬೇಕು. ಸ್ವಲ್ಪವಾದರೂ ಗೌರವವಿದ್ದರೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಖಂಡನೀಯ. ನಾಲಿಗೆ ಹರಿಬಿಡುವವರಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

‘ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯಬೇಕು ಹಾಗೂ ಹತ್ತು ವರ್ಷ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಬೇಕು’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಲು ಆಸಕ್ತಿ ತೋರಲಿಲ್ಲ. ‘ನಾನು ಏನು ಉತ್ತರ ಕೊಡಲಿ ಹೇಳಿ?’ ಎಂದು ಹೇಳುವ ಮೂಲಕ ಸುಮ್ಮನಾದರು.