ಎನ್.ಆರ್.ಪುರ: ಅರಣ್ಯಕ್ಕೆ ವನ್ಯಜೀವಿಗಳು, ಔಷಧ ಸಸ್ಯಗಳು, ಗಿಡ, ಮರಗಳೇ ಆಭರಣಗಳಿದ್ದಂತೆ ಎಂದು ಎನ್.ಆರ್.ಪುರ ಉಪ ವಲಯ ಅರಣ್ಯಾಧಿಕಾರಿ ಗೌಸ್ ಮೊಹಿಯುದ್ದೀನ್ ತಿಳಿಸಿದರು.
ಗುರುವಾರ ಶೆಟ್ಟಿಕೊಪ್ಪದಲ್ಲಿ ಎನ್.ಆರ್.ಪುರ ವಲಯ ಅರಣ್ಯಾಧಿಕಾರಿಗಳ ಆಶ್ರಯದಲ್ಲಿ ಅರಣ್ಯ ರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯಕ್ಕೆ ಬೆಂಕಿ ಬೀಳಲು ಮನುಷ್ಯರೇ ಕಾರಣ. ಅರಣ್ಯ ರಕ್ಷಣೆ ಅರಿವು ಮೂಡಿಸಲು ಅಭಿನವ ಗಿರಿರಾಜ್ ನೇತೃತ್ವದ ಕಲಾ ತಂಡದಿಂದ ಬೀದಿ ನಾಟಕ ಆಯೋಜಿಸಲಾಗಿದೆ. ಹುಲಿ ಉಗುರು, ಆನೆದಂತ, ಕಾಡು ಕೋಣದ ಕೋಡುಗಳು ಸೇರಿದಂತೆ ಯಾವುದೇ ವನ್ಯ ಜೀವಿಗಳ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅಪರಾಧವಾಗುತ್ತದೆ. ಆದ್ದರಿಂದ ಮನೆಯಲ್ಲಿ ಇಂಥ ವಸ್ತುಗಳು ಇದ್ದರೆ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ತಿಳಿಸಿದರು. ಶೆಟ್ಟಿಕೊಪ್ಪ ವೆಂಕಟೇಶ್ವರ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಅರಣ್ಯವನ್ನು ರೈತರು ರಕ್ಷಣೆ ಮಾಡುತ್ತ ಬಂದಿದ್ದಾರೆ. ಕಾಡಿನ ಬೆಂಕಿ ನಂದಿಸಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಸಹಕರಿಸುತ್ತ ಬಂದಿದ್ದಾರೆ. ಇತ್ತೀಚೆಗೆ ಕಾಡಾನೆಗಳು ಗ್ರಾಮಕ್ಕೆ ಬಂದು ಬೆಳೆ ನಾಶ ಮಾಡುತ್ತಿವೆ. ಇದನ್ನು ಅರಣ್ಯ ಇಲಾಖೆ ತಡೆಗಟ್ಟಬೇಕು ಎಂದು ಹೇಳಿದರು.ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿ, ಕೆಲವು ಬಾರಿ ಆಕಸ್ಮಿಕವಾಗಿ ಅರಣ್ಯಕ್ಕೆ ಬೆಂಕಿ ಬೀಳುತ್ತದೆ. ಕೆಲವರು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುತ್ತಾರೆ. ಅಂಥವರಲ್ಲಿ ಅರಿವು ಮೂಡಿಸಬೇಕು ಎಂದರು. ಮುತ್ತಿನಕೊಪ್ಪದಲ್ಲೂ ಬೀದಿ ನಾಟಕ ನಡೆಯಿತು. ಎನ್.ಆರ್.ಪುರ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲೂ ಕಲಾವಿದರ ತಂಡದಿಂದ ಬೀದಿ ನಾಟಕ ನಡೆಯಿತು. ಕಲಾವಿದರಾದ ಶಂಕ್ರಪ್ಪ, ವಿನೋದಾ, ಜಯಮ್ಮ, ಮಂಜಪ್ಪ, ಮೋಹನ್, ಮಂಜುನಾಥ್ ಬೀದಿ ನಾಟಕದಲ್ಲಿ ಅಭಿನಯಿಸಿದರು.ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಂ.ಜಗದೀಶ್, ಗ್ರಾಪಂ ಮಾಜಿ ಸದಸ್ಯ ಎಂ.ಮಹೇಶ್, ವನಪಾಲಕ ಮಂಜಯ್ಯ ಇದ್ದರು.