ವಿಜಯವಾಣಿ ಸುದ್ದಿಜಾಲ ಉಡುಪಿ
ವನ್ಯಜಿವಿ ಛಾಯಾಗ್ರಹಣ ದೊಡ್ಡವರಿಗೂ ಕಷ್ಟದ ಕೆಲಸ. ಹೀಗಿರುವಾಗ ಕೇವಲ 10 ವರ್ಷದವನಾಗಿದ್ದಾಗ ಅದ್ವೀತಿಯ ಸಾಧನೆ ಮಾಡಿದ್ದ ಉಡುಪಿಯ ವಿದ್ಯುನ್ ಆರ್. ಹೆಬ್ಬಾರ್ಗೆ ಇದೀಗ ಲಂಡನ್ನಿಂದ ವಿಶೇಷ ಆಹ್ವಾನ ಬಂದಿದೆ.
2021ರ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಫ್ ದ ಇಯರ್ ಎಂಬ ಲಂಡನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಯ 18 ವರ್ಷದೊಳಗಿನ ವಿಭಾಗದಲ್ಲಿ ವಿದ್ಯುನ್ ಗ್ರ್ಯಾಂಡ್ ಟೈಟಲ್ ಪ್ರಶಸ್ತಿ ಗೆದ್ದಿದ್ದನು. ಈ ಪ್ರಶಸ್ತಿಯನ್ನು ವೈಲ್ಡ್ ಲೈಫ್ ಫೋಟೋಗ್ರಾಫಿಯ ಆಸ್ಕರ್ಸ್ ಎಂದೇ ಕರೆಯಲಾಗುತ್ತದೆ.
ಕರೊನಾ ವೈರಸ್ ಕಾರಣದಿಂದಾಗಿ ಆನ್ಲೈನ್ ಕಾರ್ಯಕ್ರಮದ ಮೂಲಕ ಆತನಿಗೆ ಅಂದು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇದೀಗ 2021ರ ಆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 60ನೇ ವರ್ಷದ ಸಂಭ್ರಮೋತ್ಸವ ಲಂಡನ್ ನಡೆಯಲಿದ್ದು, ವಿದ್ಯುನ್ಗೆ ವಿಶೇಷ ಆಹ್ವಾನ ಬಂದಿದೆ. ಅ.8ರಂದು ನಡೆಯುವ ಕಾರ್ಯಕ್ರಮದಲ್ಲಿ ಆತ ಪಾಲ್ಗೊಳ್ಳಲಿದ್ದಾನೆ.
ಪ್ರಸ್ತುತ 13 ವರ್ಷದ ವಿದ್ಯುನ್ ಹೆಬ್ಬಾರ್ ಹುಳಿಮಾವು ಗ್ರಾಮದ ಬಿಜಿಎಸ್ ಎನ್ಪಿಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ರವಿಪ್ರಕಾಶ್ ಮತ್ತು ನಮಿತಾ ದಂಪತಿಯ ಪುತ್ರ. ತಂದೆಯೂ ಸಹ ಛಾಯಾಗ್ರಾಹಕರಾಗಿದ್ದು, 2014ರಲ್ಲಿ ಅವರೂ ಸಹ ಅದೇ ಪ್ರಶಸ್ತಿಗೆ ಭಾಜನರಾಗಿದ್ದರು. ಚಿಕ್ಕಂದಿನಿಂದಲೂ ವನ್ಯಜಿವಿ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದ ಆತ, 3 ವರ್ಷದವನಾಗಿದ್ದಾಗಲೇ ತಂದೆಯ ಡಿಎಸ್ಎಲ್ಆರ್ ಕ್ಯಾಮರಾದಿಂದ ಛಾಯಾಗ್ರಹಣ ಮಾಡುವುದನ್ನು ಕಲಿತಿದ್ದು, ಆ ಕಲೆ ರಕ್ತಗತವಾಗಿ ಬಂದಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಛಾಯಾಗ್ರಹಣ ಕೌಶಲ ಮೆರೆದಿರುವ ಬಾಲಕ, ಯಕ್ಷಗಾನ ಕಲಾವಿದ ಹರಿದಾಸ ಮಲ್ಪೆ ರಾಮದಾಸ ಸಾಮಗ ಹಾಗೂ ನಾಗರತ್ನಾ ಸಾಮಗ ದಂಪತಿಯ ಮರಿಮಗ, ಸಾಹಿತಿ ಅಂಬುಜಾ ಅವರ ಮೊಮ್ಮಗನಾಗಿದ್ದಾನೆ.