ಜಿಲ್ಲೆ

ಉಪಗ್ರಹದಿಂದ ಕಾಡ್ಗಿಚ್ಚಿನ ಎಚ್ಚರಿಕೆ ಸಂದೇಶ: ಸಿಎಫ್ ಸುನಿಲ್ ಪನ್ವಾರ್

madikerimailmanju

ಚಿಕ್ಕಮಗಳೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಉಪಗ್ರಹದಿಂದ ಕಾಡ್ಗಿಚ್ಚಿನ ಎಚ್ಚರಿಕೆಯ ಸಂದೇಶ ಪಡೆಯಲು ಅವಕಾಶವಿರುವುದರಿಂದ ಇಲಾಖೆಯ ಅಧಿಕಾರಿ-ಸಿಬ್ಬಂದಿ ಅತ್ಯಂತ ಕ್ರಿಯಾಶೀಲರಾಗಿರಬೇಕು ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನೀಲ್ ಪನ್ವಾರ್ ನಿರ್ದೇಶನ ನೀಡಿದರು.

ನಗರ ಸಮೀಪದ ಮತ್ತಾವರ ಅರಣ್ಯ ಮಾಹಿತಿ ಕೇಂದ್ರದಲ್ಲಿ ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗ ಬುಧವಾರ ಏರ್ಪಡಿಸಿದ್ದ ಬೆಂಕಿಯಿಂದ ಕಾಡಿನ ರಕ್ಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯಕ್ಕೆ ಬೆಂಕಿ ತಗಲುವುದು ನೈಸರ್ಗಿಕ ಕಾರಣಗಳಿಂದಲ್ಲ. ಅದು ಮನುಷ್ಯರ ಕೃತ್ಯ. ಈ ಹಿನ್ನೆಲೆಯಲ್ಲಿ ಕೆಲವು ವೇಳೆ ದ್ವೇಷದಿಂದ ಹಾಗೂ ಆಕಸ್ಮಿಕವಾಗಿ ಸಹ ಬೆಂಕಿ ತಗಲುತ್ತದೆ. ಹೀಗಾಗಿ ಜನರ ಸಹಕಾರ ಪಡೆದು ಅತ್ಯಂತ ಕ್ರಿಯಾಶೀಲರಾಗಿ ಬೇಸಿಗೆಯಲ್ಲಿ ಕಾಡಿನ ಬೆಂಕಿ ನಿಯಂತ್ರಣಕ್ಕೆ ಸಿದ್ಧರಾಗಿರಬೇಕು ಎಂದು ಕಿವಿಮಾತು ಹೇಳಿದರು.

ಸೀಮಿತ ಚಿಂತನೆ ಸಲ್ಲದು
ಕಾಡಿಗೆ ಹೊತ್ತಿದ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಹೊಸಬರನ್ನು ಅನುಭವಿ ಸಿಬ್ಬಂದಿ ಜತೆಗೆ ಕಳುಹಿಸುವ ಬಗ್ಗೆ ಆಯಾ ವಲಯಾರಣ್ಯಾಧಿಕಾರಿ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಅವಘಡಗಳು ಸಂಭವಿಸುತ್ತವೆ. ಅರಣ್ಯ ರಕ್ಷಣೆ ಜತೆಗೆ ಸಿಬ್ಬಂದಿ ವೈಯಕ್ತಿಕ ರಕ್ಷಣೆಯತ್ತ ಕೂಡ ಗಮನ ಹರಿಸಬೇಕೆಂದು ಸಲಹೆ ಮಾಡಿದರು.

ಬೆಂಕಿ ಹತ್ತಿದ ಪ್ರದೇಶ ತಮ್ಮ ಬೀಟ್‍ಗೆ ಸಂಬಂಧಿಸಿದ್ದಲ್ಲ ಎಂಬ ಸೀಮಿತ ಚಿಂತನೆ ಮಾಡದೆ ಅರಣ್ಯದ ಯಾವುದೇ ಕಡೆ ಬೆಂಕಿ ಬಿದ್ದಿದ್ದರೂ ವಲಯ, ಬೀಟ್ ಎಂದು ಪ್ರತ್ಯೇಕಿಸಿ ನೋಡದೆ ಬೆಂಕಿ ಆರಿಸಲು ಮುಂದಾಗಬೇಕು. ಬೆಂಕಿ ನಿಯಂತ್ರಣದಲ್ಲಿ ಪರಸ್ಪರ ಪೂರಕವಾಗಿ ವರ್ತಿಸಲು ಸೂಚಿಸಿದರು. ಬೆಂಕಿ ನಿಯಂತ್ರಣಕ್ಕೆ ಅಧಿಕಾರಿ-ಸಿಬ್ಬಂದಿ ಅರಣ್ಯದಂಚಿನಲ್ಲಿರುವ ಜನರು ಹಾಗೂ ವಿವಿಧ ಸಂಘ-ಸಂಸ್ಥೆಗಳ ನೆರವು ಪಡೆದುಕೊಳ್ಳಬೇಕು. ಬೆಂಕಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸೂಕ್ಷ್ಮಪ್ರದೇಶಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದುಹೇಳಿದರು.

ಮಾಹಿತಿ ಹಂಚಿಕೊಳ್ಳಬೇಕು
ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್.ಜಗನ್ನಾಥ್ ಮಾತನಾಡಿ, ಚಿಕ್ಕಮಗಳೂರು ಪಶ್ಚಿಮ ಘಟ್ಟದ ಭಾಗವಾಗಿದ್ದು, ವಿವಿಧ ರೀತಿಯ ಅರಣ್ಯ ಹೊಂದಿದೆ. ಮಾನವ ಹಸ್ತಕ್ಷೇಪದಿಂದ ಬೀಳುವ ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ಅತ್ಯಂತ ಚುರುಕಿನಿಂದ ಸಿದ್ಧತೆ ಮಾಡಿಕೊಳ್ಳಬೇಕೆಂದು ಹೇಳಿದರು. ಬೆಂಕಿ ತಗುಲಿದ ಮಾಹಿತಿ ಬಂದ ಕೂಡಲೇ ಹಂಚಿಕೊಳ್ಳುವುದು ಅಗತ್ಯ. ಈಗ ದೂರ ಸಂವೇದಿ ವ್ಯವಸ್ಥೆಯಿಂದಲೇ ಬೆಂಕಿ ಅವಘಡದ ಮಾಹಿತಿ ಪಡೆಯಬಹುದು.

ಜಿಲ್ಲೆಯಲ್ಲಿ 71 ಹೆಕ್ಟೇರ್ ಅರಣ್ಯ
ಜಿಲ್ಲೆಯಲ್ಲಿ ಒಟ್ಟು 71 ಹೆಕ್ಟೇರ್ ಅರಣ್ಯವಿದೆ. ಬೆಂಕಿ ಆರಿಸುವ ಆಧುನಿಕ ಸಾಮಗ್ರಿಗಳು ಇವೆ. ಜತೆಗೆ ಸ್ಥಳೀಯರಿಂದ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದಲೂ ಮಾಹಿತಿ ಪಡೆದು ಬೆಂಕಿ ನಿಯಂತ್ರಣಕ್ಕೆ ಸಿಬ್ಬಂದಿ ಮುಂದಾಗಬೇಕೆಂದು ಹೇಳಿದರು.
ವನ್ಯಜೀವಿ ಗೌರವ ಪರಿಪಾಲಕ ಜಿ.ವೀರೇಶ್ ಮಾತನಾಡಿ, ಸರ್ಕಾರ ಹೆಚ್ಚು ಹಣವನ್ನು ಕಾಡಿನ ಬೆಂಕಿ ನಿಯಂತ್ರಣಕ್ಕೆ ಬಿಡುಗಡೆ ಮಾಡಬೇಕು. ಬೆಂಕಿ ನಿಯಂತ್ರಣ ಹಾಗೂ ಬೆಂಕಿಯಿಂದ ಹಾಳಾಗಿರುವ ಕಾಡಿನ ವರ್ಣ ಪಾರದರ್ಶಿಕೆ ಪ್ರದರ್ಶಿಸಿದರು.

ಕ್ರಿಯಾಯೋಜನೆ ಸಿದ್ಧ
ಇಲಾಖೆ ಪತ್ರಾಂಕಿತ ಅಧಿಕಾರಿ ರವಿ ಕೆ.ಪಂಡಿತ್ ಮಾತನಾಡಿ, ಸ್ಥಳೀಯರ ಪೂರ್ಣ ಸಹಕಾರ ಪಡೆದು ಅರಣ್ಯವನ್ನು ಬೆಂಕಿಯಿಂದ ರಕ್ಷಿಸಬೇಕು. ಈಗಾಗಲೇ ಕ್ರಿಯಾಯೋಜನೆ ಸಿದ್ಧವಾಗಿದೆ ಎಂದು ಅದರ ವಿವರವನ್ನು ವರ್ಣಪಾರದರ್ಶಿಕೆ ಮೂಲಕ ನೀಡಿದರು.
ಜನರಿಗೆ ತಿಳಿವಳಿಕೆ ನೀಡಬೇಕು

ವೈಲ್ಡ್ ಕ್ಯಾಟ್-ಸಿ ಮುಖ್ಯಸ್ಥ ಶ್ರೀದೇವ್ ಹುಲಿಕೆರೆ ಮಾತನಾಡಿ, ಕಾಡಿನ ಒತ್ತಿಗಿರುವ ಜನಕ್ಕೆ ಬೆಂಕಿ ಆವರಿಸುವ ಹಾಗೂ ಅದರ ನಿಯಂತ್ರಣದ ಬಗ್ಗೆ ತಿಳಿವಳಿಕೆ ನೀಡಬೇಕು. ಅಕ್ರಮವಾಗಿ ಕಾಡಿಗೆ ಬೆಂಕಿ ಹಚ್ಚುವವರ ವಿರುದ್ಧ ಕಠಿಣ ಕ್ರಮ ಅಗತ್ಯ. ಜಿಲ್ಲೆಯ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್ ಮಾಲೀಕರಿಗೆ ಅವರಲ್ಲಿಗೆ ಬರುವ ಪ್ರವಾಸಿಗರಿಗೆ ಅರಣ್ಯದಲ್ಲಿ ಬೆಂಕಿ ಹತ್ತಿಕೊಳ್ಳುವ ಬಗೆ ಹಾಗೂ ಕೈಗೊಳ್ಳಬೇಕಾದ ನಿಯಂತ್ರಣದ ಬಗ್ಗೆ ಕರಪತ್ರಗಳ ಮೂಲಕ ತಿಳಿವಳಿಕೆ ನೀಡಲು ಸೂಚಿಸಬೇಕು. ಕಾಡಿನ ಪಕ್ಕದ ತೋಟಗಳ ಮಾಲೀಕರು ತಮ್ಮ ತೋಟದ ಗಡಿಯನ್ನು ಬೆಂಕಿಯಿಂದ ರಕ್ಷಿಸಿಕೊಳ್ಳಲು ಬೆಂಕಿ ರೇಖೆ ನಿರ್ಮಿಸುವಾಗ ಅರಣ್ಯದ ಗಡಿಯಲ್ಲಿ ನೆಲ ಬೆಂಕಿ ಕೈಗೊಳ್ಳದಂತೆ ಸೂಚಿಸಬೇಕು. ಇಲಾಖೆ ಕಾಡಿನ ಸುತ್ತಲಲ್ಲಿರುವ ತೋಟ ಹಾಗೂ ಜಮೀನು ಮಾಲೀಕರ ಸಭೆ ನಡೆಸಿ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.

ನಗದು ಪುರಸ್ಕಾರ ನೀಡಬೇಕು
ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಬೆಂಕಿ ನಿಯಂತ್ರಣ ಕಾರ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಇಲಾಖೆ ಅಧಿಕಾರಿ ಸಿಬ್ಬಂದಿಗೆ ನಗದು ಪುರಸ್ಕಾರ ನೀಡುವ ಆಲೋಚನೆ ಮಾಡಲು ಸಲಹೆ ಮಾಡಿದರೆ, ಬೆಂಕಿ ನಿಯಂತ್ರಣಕ್ಕೆ ಸ್ಥಳೀಯರನ್ನು ಬಳಕೆ ಮಾಡಿಕೊಳ್ಳಲು ಇಲಾಖೆ ಮುಂದಾಗಬೇಕೆಂದು ಒನ್ ಅರ್ಥ್ ಟ್ರಸ್ಟ್ ನ ಮುಖ್ಯಸ್ಥ ಸಿ.ವಿ.ಭರತ್ ತಿಳಿಸಿದರು.

ಕರಪತ್ರ ಬಿಡುಗಡೆ
ಇದೇ ವೇಳೆ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಬಗ್ಗೆ ಮತ್ತು ಆನೆ-ಮಾನವ ಸಂಘರ್ಷ ತಗ್ಗಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು. ಎಸಿಎಫ್ ಮುದ್ದಣ್ಣ, ಮೂಡಿಗೆರೆ ಉಪವಿಭಾಗದ ಅಧಿಕಾರಿ ನಿರ್ಮಲಾ ಇದ್ದರು.