ಮಂಡ್ಯ: ಎರಡು ದಿನದ ಹಿಂದಷ್ಟೇ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಎರಡು ಕಾಡಾನೆ ಸೋಮವಾರ ತಡರಾತ್ರಿ ನಗರದ ಹೊರವಲಯದಲ್ಲಿ ಸುತ್ತಾಟ ನಡೆಸಿ ಸದ್ವಿದ್ಯಾ ಶಾಲೆ ಸಮೀಪದ ಕಬ್ಬಿನ ಗದ್ದೆ ಸೇರಿಕೊಂಡಿವೆ.
ರಾಮನಗರ ಜಿಲ್ಲೆ ಕನಕಪುರ ಅರಣ್ಯ ಪ್ರದೇಶದಿಂದ ಚನ್ನಪಟ್ಟಣದ ಮಾರ್ಗವಾಗಿ ಮದ್ದೂರು ಪ್ರವೇಶಿಸಿದ ಕಾಡಾನೆ, ಬಳಿಕ ಶ್ರೀರಂಗಪಟ್ಟಣದತ್ತ ಹೋಗಿದ್ದವು. ಅಲ್ಲಿ ರೈತರ ಜಮೀನಿಗೆ ದಾಳಿ ಮಾಡಿ ಬೆಳೆ ಹಾನಿ ಮಾಡಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಚಲನ ವಲನ ಗಮನಿಸುತ್ತಿದ್ದರು.
ಈ ನಡುವೆಯೇ ಸೋಮವಾರ ತಡರಾತ್ರಿ 1.30ರ ಸುಮಾರಿಗೆ ಜ್ಯೋತಿ ಇಂಟರ್‌ನ್ಯಾಷನಲ್ ಸಮೀಪ ಕಾಣಿಸಿಕೊಂಡಿವೆ. ಆದರೆ ಈ ಸಮಯದಲ್ಲಿ ಅರಣ್ಯಾಧಿಕಾರಿಗಳ ಸಮಯಪ್ರಜ್ಞೆಯಿಂದ ಕಿರಂಗದೂರು ಮಾರ್ಗದ ಕಡೆಗೆ ಓಡಿಸಿದ್ದಾರೆ. ಒಂದು ವೇಳೆ ನಗರದೊಳಕ್ಕೆ ಪ್ರವೇಶಿಸಿದ್ದಾರೆ ಅನಾಹುತವಾಗುವ ಸಂಭವವಿತ್ತು. ಅದೃಷ್ಟವಶಾತ್ ಅಧಿಕಾರಿಗಳು ರಾತ್ರಿಪೂರ್ತಿ ಕಾರ್ಯಾಚರಣೆ ನಡೆಸಿ ಕಿರಂಗದೂರು ಮಾರ್ಗವಾಗಿ ಓಡಿಸಿದ ಪರಿಣಾಮ ಸದ್ವಿದ್ಯಾ ಶಾಲೆ ಸಮೀಪದ ಕಬ್ಬಿನ ಗದ್ದೆಯೊಳಕ್ಕೆ ಸೇರಿಕೊಂಡವು. ಇದಕ್ಕೂ ಮುನ್ನ ಬೀದಿನಾಯಿಗಳು ಬೊಗಳುತ್ತಿರುವುದನ್ನು ಕಂಡು ಸಾರ್ವಜನಿಕರಿಗೂ ಮಾಹಿತಿ ಸಿಕ್ಕಿದೆ. ಜಮೀನಿನೊಳಗಿರುವ ಆನೆಗಳನ್ನು ನೋಡಲು ಜನರು ಮುಗಿ ಬಿದ್ದಿದ್ದರೂ, ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿ ಆನೆಗಳ ಸಮೀಪ ಜನತೆ ಸುಳಿಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಮಂಗಳವಾರ ರಾತ್ರಿ ವೇಳೆಗೆ ಕಾರ್ಯಾಚರಣೆ ನಡೆಸಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಅಟ್ಟಲು ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ.