ಜಿಲ್ಲೆ

ಕಾಡಾನೆಗಳ ದಾಳಿಯಿಂದ ಮುಸಕಿನ ಜೋಳ, ಬಾಳೆ ನಾಶ

Mysuru - Desk - Ravikumar

ಹನೂರು: ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಜಮೀನೊಂದಕ್ಕೆ ಸೋಮವಾರ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ನೀರಾವರಿ ಪರಿಕರ ಹಾಗೂ ಮುಸುಕಿನ ಜೋಳದ ಫಸಲನ್ನು ನಾಶಗೊಳಿಸಿದ ಬಳಿಕ ಮತ್ತೊಂದು ಜಮೀನಿಗೆ ಲಗ್ಗೆ ಇಟ್ಟು ಕಟಾವಿಗೆ ಬಂದಿದ್ದ ಬಾಳೆ ಫಸಲನ್ನು ನಾಶಪಡಿಸಿವೆ.

ಸೋಮವಾರ ಬೆಳಗಿನ ಜಾವ 4 ಗಂಟೆಯಲ್ಲಿ ಗ್ರಾಮದ ಹೊರವಲಯದಲ್ಲಿನ ಕನಕರಾಜು ಎಂಬುವರ ಜಮೀನಿಗೆ 3 ಕಾಡಾನೆಗಳು ಲಗ್ಗೆ ಇಟ್ಟು ನೀರಾವರಿ ಪರಿಕರ ಹಾಗೂ ಮುಸುಕಿನ ಜೋಳದ ಫಸಲನ್ನು ತಿಂದು ತುಳಿದು ನಾಶಪಡಿಸಿದ್ದವು. ಜತೆಗೆ ಸಮೀಪದ ಕುಮಾರ್ ಎಂಬುವರ ಜಮೀನಿನಲ್ಲೂ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ.

ಸುದ್ದಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಕಾಡಾನೆಗಳು ಜಮೀನಿನತ್ತ ಬಾರದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ಆದರೆ ರಾತ್ರಿಯೇ ಕೃಷ್ಣಪ್ಪ ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಸುಮಾರು 200ಕ್ಕೂ ಹೆಚ್ಚು ಗೊನೆ ಬಿಟ್ಟಿದ್ದ ಬಾಳೆ ಫಸಲನ್ನು ನಾಶಪಡಿಸಿವೆ. ಈ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕರಾಜು, ರೈತರಾದ ಶಿವರಾಜು, ಮುನಿಯಪ್ಪ, ಗೋವಿಂದ, ಕನಕರಾಜು, ಕೃಷ್ಣಪ್ಪ, ಮುಕುಂದ, ರಾಮಯ್ಯ, ತಿರುಮಯ್ಯ ಹಾಗೂ ಇನ್ನಿತರರು ಇದ್ದರು.

ಪ್ರತಿಭಟನೆಯ ಎಚ್ಚರಿಕೆ: ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಮಲ್ಲಯ್ಯನಪುರ ಭಾಗದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಹಲವು ಜಮೀನಿಗಳಿಗೆ ಲಗ್ಗೆ ಇಟ್ಟು ಫಲಸನ್ನು ನಾಶಪಡಿಸುತ್ತಿವೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆಯೇ ಹೊರತು ಅಗತ್ಯ ಸಿಬ್ಬಂದಿ ನಿಯೋಜಿಸಿ ಕಾಡಾನೆಗಳ ಹಾವಳಿ ನಿಯಂತ್ರಿಸುತ್ತಿಲ್ಲ. ಇದರಿಂದ ಪದೆ ಪದೇ ಕಾಡಾನೆಗಳು ಜಮೀನಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದು, ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕು. ಇಲ್ಲವಾದಲ್ಲಿ ಈ ಭಾಗಕ್ಕೆ ಆಗಮಿಸುವ ಜೀಪ್ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.