ಬೇಲೂರು: ತಾಲೂಕಿನ ದೇವಾಲಪುರ ಗ್ರಾಮದಲ್ಲಿ ರೈತರು ಜಮೀನಿನಲ್ಲಿ ಬೆಳೆ ಕಟಾವು ಮಾಡಿ ಬೇರ್ಪಡಿಸಿಟ್ಟಿದ್ದ ಭತ್ತವನ್ನು ಕಾಡಾನೆಗಳು ತಿಂದು, ಭತ್ತ ತುಂಬಿದ್ದ ಚೀಲಗಳನ್ನೆಲ್ಲ ಎಲ್ಲೆಂದರಲ್ಲಿ ಬಿಸಾಡಿ ನಾಶ ಪಡಿಸಿವೆ.
ತಾಲೂಕಿನ ಮಲೆನಾಡು ಭಾಗದ ಬಿಕ್ಕೋಡು-ಅರೇಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು, ಕೆಲ ದಿನಗಳಿಂದ ಪ್ರತ್ಯೇಕ ಗುಂಪುಗಳಾಗಿ ಜಮೀನು, ತೋಟಗಳಿಗೆ ನುಗ್ಗಿ ಕಾಫಿ, ಅಡಕೆ ಭತ್ತ ನಾಶ ಪಡಿಸುತ್ತಿವೆ. ಮಲೆನಾಡು ಭಾಗದ ಗ್ರಾಮಗಳಲ್ಲಿ ಬೆಳೆದಿದ್ದ ಜೋಳದ ಬೆಳೆಗೆ ದಾಳಿ ಇಡುತ್ತಿದ್ದ ಕಾಡಾನೆಗಳು ಈಗ ರೈತರು ಜೋಳವನ್ನು ಕಟಾವು ಮಾಡಿರುವುದರಿಂದ ಭತ್ತದ ಗದ್ದೆಗಳತ್ತ ನುಗ್ಗಲು ಪ್ರಾರಂಭಿಸಿವೆ. ಹೀಗಾಗಿ ಭತ್ತ ಬೆಳೆದ ರೈತರ ಆತಂಕಕ್ಕೀಡಾಗಿದ್ದಾರೆ.
ಶುಕ್ರವಾರ ರಾತ್ರಿ ತಾಲೂಕಿನ ಕಳ್ಳೇರಿ ಗ್ರಾಪಂ ವ್ಯಾಪ್ತಿಯ ಗಂಡೇಹಳ್ಳಿ ಸಮೀಪದ ದೇವಾಲಪುರ ಗ್ರಾಮಕ್ಕೆ ದಾಳಿ ಮ ಇಟ್ಟಿರುವ 12ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು 50 ಎಕರೆಯಲ್ಲಿ ಕಟಾವು ಮಾಡಿ ಯಂತ್ರದ ಮೂಲಕ ಬೇರ್ಪಡಿಸಿ ಮಾರನೇ ದಿನ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹೋಗುವುದಕ್ಕಾಗಿ ಜಮೀನಿನಲ್ಲೆ ಬಿಟ್ಟಿದ್ದ ಭತ್ತವನ್ನು ತಿಂದುಹಾಕಿವೆ. ಗದ್ದೆಗೆ ನುಗ್ಗಿದ ಕಾಡಾನೆಗಳು ಗ್ರಾಮದ ಮನು, ಹೂವೇಗೌಡ, ಹಾಲೇಗೌಡ, ಹಿರಿಗೌಡ, ಶರತ್ ಹಾಗೂ ರಮೇಶ್ ಅವರಿಗೆ ಸೇರಿದ 60 ಕ್ವಿಂಟಾಲ್‌ಗೂ ಹೆಚ್ಚು ಭತ್ತವನ್ನು ತಿಂದಿವೆ. ಅಲ್ಲದೆ ಕಣದಲ್ಲಿ ತುಂಬಿಟ್ಟಿದ್ದ ಭತ್ತದ ಚೀಲಗಳನ್ನೆಲ್ಲ ಎಲ್ಲೆಂದರಲ್ಲಿ ಎಸೆದು ಹಾಳು ಮಾಡಿದ್ದು, ವರ್ಷವೆಲ್ಲ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕಾಡಾನೆಗಳ ಉಪಟಳ ತಪ್ಪಿಸುವಲ್ಲಿ ವಿಫಲರಾಗುತ್ತಿರುವ ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ರೈತರು, ವ್ಯಕ್ತಪಡಿಸುತ್ತಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಮತ್ತು ಬಿಟ್ಟಿರುವ ಕಾಡಾನೆಗಳನ್ನು ಓಡಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.