ಸಕಲೇಶಪುರ: ಬುದ್ಧಿವಂತ ಪ್ರಾಣಿ ಎಂದು ಕರೆಯಿಸಿಕೊಳ್ಳುವ ಆನೆ ತನ್ನ ಸಂಚಾರಕ್ಕೆ ಅಡ್ಡಿಯಾಗಿದ್ದ ಸೋಲಾರ್ ವಿದ್ಯುತ್ ಬೇಲಿಯನ್ನು ದಾಟಲು ಮರವನ್ನು ಉರುಳಿಸಲು ವಿಫಲ ಯತ್ನ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಗುರುವಾರ ಮುಂಜಾನೆ ತಾಲೂಕಿನ ಕೋಗರವಳ್ಳಿ ಗ್ರಾಮದ ಸಂತೋಷ ಎಂಬವರ ತೋಟದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ತೋಟದಿಂದ ಹೊರಬರಲು ಸೋಲಾರ ವಿದ್ಯುತ್ ಬೇಲಿ ಅಡ್ಡಿಯಾಗಿತ್ತು.
ಆದರೆ ಬೇಲಿ ದಾಟಲು ಸೋಲಾರ್ ವಿದ್ಯುತ್ ಬೇಲಿಯ ಸಮೀಪವೇ ಇದ್ದ ಮರವನ್ನು ಬೇಲಿ ಮೇಲೆ ಉರುಳಿಸುಲಿ ಅದರ ಮೇಲೆ ಕಾಲಿಟ್ಟು ಬೇಲಿ ಹಾರುವ ಯೋಜನೆ ರೂಪಿಸಿ ಪ್ರಯತ್ನ ಆರಂಭಿಸಿತು.
ಆನೆ ಮುರಿಯಲು ಯತ್ನಿಸಿದ ಮರಕ್ಕೆ ವಿದ್ಯುತ್ ಪ್ರವಹಿಸಿದ್ದರಿಂದ ಮರ ಬೀಳಿಸುವ ತನ್ನ ಪ್ರಯತ್ನ ಕೈ ಬಿಟ್ಟು ತೋಟದ ಮತ್ತೊಂದೆಡೆ ಇದ್ದ ಗೇಟನ್ನು ಧ್ವಂಸಗೊಳಿಸಿ ಹೊರ ಬಂದಿತು.
ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರು ಆನೆಯ ಸಾಹಸವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.