ಜಿಲ್ಲೆ

ಕಾಡಾನೆ ದಾಳಿ, ಕುಂಟಿಕಾನದಲ್ಲಿ ಕೃಷಿ ಹಾನಿ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿ ಮತ್ತು ಆವರಣ ಗೋಡೆಗಳನ್ನು ಕೆಡವಿ ಹಾಕಿ ಭೀತಿ ಸೃಷ್ಟಿಸಿದ್ದ ಒಂಟಿ ಕಾಡಾನೆ ನೆರೆಯ ಕೊಳ್ತಿಗೆ ಗ್ರಾಮದಲ್ಲಿ ಕೃಷಿಹಾನಿ ದಾಂಧಲೆ ಮುಂದುವರಿಸಿದೆ.

ಕೆಯ್ಯೂರಿನಿಂದ ಕೊಳ್ತಿಗೆ ಗ್ರಾಮಕ್ಕೆ ತೆರಳಿರುವ ಕಾಡಾನೆ ಬುಧವಾರ ರಾತ್ರಿ ವೇಳೆ ಕೊಳ್ತಿಗೆ ಗ್ರಾಮದ ಕುಂಟಿಕಾನ ಪ್ರದೇಶಕ್ಕೆ ಕಾಲಿಟ್ಟಿದೆ. ಕುಂಟಿಕಾನದ ನಿವಾಸಿ ನಿವೃತ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಅವರ ತೋಟದಲ್ಲಿ ಬಾಳೆಕೃಷಿ ಹಾಗೂ ತೋಟಕ್ಕೆ ಅಳವಡಿಸಲಾಗಿದ್ದ ನೀರಾವರಿ ವ್ಯವಸ್ಥೆಯ ಸ್ಪ್ರಿಂಕ್ಲರ್‌ಗಳನ್ನು ಹಾನಿಗೊಳಿಸಿದೆ. ಅವರ ಸಹೋದರ ತೇಜಕುಮಾರ್ ತೋಟಕ್ಕೆ ನುಗ್ಗಿರುವ ಕಾಡಾನೆ 3 ತೆಂಗಿನ ಮರಗಳನ್ನು ಮುರಿದು ಹಾಕಿ ನಾಶಗೊಳಿಸಿದೆ. ನೆರೆಯ ಜನಾರ್ದನ್ ಎಂಬುವರ ತೋಟದಲ್ಲಿ 1ತೆಂಗಿನ ಮರವನ್ನು ಮುರಿದು ಹಾಕಿದ್ದಲ್ಲದೆ ದೀವಿ ಹಲಸು ಮರಗಳನ್ನು ಹಾನಿಗೊಳಿಸಿದೆ.

ಕಾಡಾನೆ ಬುಧವಾರ ರಾತ್ರಿಯಾಗುತ್ತಲೇ ಕುಂಟಿಕಾನ ಪರಿಸರಕ್ಕೆ ಬಂದಿದೆ. ಕಾಡಾನೆ ಮರಗಳನ್ನು ಮುರಿಯುವ ಶಬ್ಧಕೇಳಿ ಸ್ಥಳೀಯರು ಗರ್ನಾಲ್ ಸಿಡಿಸಿದ್ದರು. ಈ ವೇಳೆ ಕಾಡಾನೆ ನಮ್ಮ ಭಾಗಕ್ಕೆ ಬಂದು ಕೃಷಿಹಾನಿ ಮಾಡಿದೆ. ಗುರುವಾರ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಕೃಷಿ ನಷ್ಟಕ್ಕೊಳಗಾಗಿರುವ ಕುಂಟಿಕಾನದ ಕೃಷಿಕರು ಮಾಹಿತಿ ನೀಡಿದ್ದಾರೆ.