ಜಿಲ್ಲೆ

ಧರ್ಮಸ್ಥಳದಲ್ಲಿ ಕಾಡಾನೆಗಳ ಹಾವಳಿ

ಸೌಮ್ಯ ಆರ್

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ. ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲಸೊಳಿಕೆ ನಿವಾಸಿ ಕೃಷ್ಣಪ್ಪ ಮನೆ ಸಮೀಪದ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಹಾಗೂ ಅಡಕೆ, ಮರಗೆಣಸಿನ ಗಿಡ ನಾಶಗೊಳಿಸಿದ್ದು, ಮನೆಯ ಸಮೀಪವೇ ಆನೆಗಳು ಓಡಾಟ ನಡೆಸಿದ್ದು ಜನರಲ್ಲಿ ಭಯ ಹುಟ್ಟಿಸಿದೆ.

ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ನಿವಾಸಿ ಕ್ಸೇವಿಯರ್ ಎಂಬುವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿಗೆ ಹಾನಿಯುಂಟು ಮಾಡಿವೆ. ಫಸಲು ಬರುವ ಸುಮಾರು ಹತ್ತಕ್ಕೂ ಅಧಿಕ ಅಡಕೆ ಮರ ಹಾಗೂ ಹಲವು ತೆಂಗಿನ ಮರಗಳನ್ನು ನೆಲಕ್ಕುರುಳಿಸಿವೆ. ತೋಟದಲ್ಲಿ ನೀರಿನ ಸಂಪರ್ಕಕ್ಕೆ ಹಾಕಲಾಗಿದ್ದ ಪೈಪ್‌ಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಭಾರಿ ನಷ್ಟ ಸಂಭವಿಸಿದೆ.

ನೇರ್ತನೆ ರಸ್ತೆಯ ಪಕ್ಕದಲ್ಲಿಯೇ ಕಾಡಾನೆಗಳು ಓಡಾಟ ನಡೆಸುತ್ತಿದ್ದು, ಸಂಜೆಯಾದರೆ ಜನರು ಮನೆಗಳಿಂದ ಹೊರಬರಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.

ಚಾರ್ಮಾಡಿಯಲ್ಲೂ ಅಟ್ಟಹಾಸ

ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಅನಂತರಾವ್ ಎಂಬುವರ ತೋಟಕ್ಕೆ ಶನಿವಾರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು 60 ಅಡಕೆ ಮರ ಹಾಗೂ ಒಂದು ತೆಂಗಿನ ಮರವನ್ನು ನಾಶಪಡಿಸಿದೆ. ಹಿಂಡಿನಲ್ಲಿ ಸುಮಾರು 6 ಕಾಡಾನೆಗಳಿರುವ ಶಂಕೆ ವ್ಯಕ್ತವಾಗಿದ್ದು ತೋಟದಲ್ಲಿ ಮೂಡಿರುವ ಆನೆಗಳ ಹೆಜ್ಜೆಗಳು ಇದನ್ನು ದೃಢೀಕರಿಸುತ್ತಿವೆ. ಕಾಡಾನೆ ದಾಳಿಯಿಂದ ರೋಸಿ ಈ ಭಾಗದ ಜನ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯವನ್ನು ಮಾಡುವಂತೆ ಒತ್ತಾಯಿಸುತ್ತಿದ್ದಾರೆ.