ಜಿಲ್ಲೆ

ಹಿರೆಬಂಡಾಡಿಯಿಂದ ಕಾಡಿಗೆ ತೆರಳಿದ ಆನೆ

ಸೌಮ್ಯ ಆರ್

ಉಪ್ಪಿನಂಗಡಿ: ಬುಧವಾರ ದಿನವಿಡೀ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದ ಕಾಡಾನೆ ಗುರುವಾರ ನುಸುಕಿನ ವೇಳೆ ನದಿ ದಾಟಿ ಗ್ರಾಮ ತೊರೆದಿದೆ.

ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್, ಕರೆಂಕಿ, ಕೊಲ್ಲೆಜಾಲು ಎಂಬಲ್ಲೆಲ್ಲಾ ಅಲೆದಾಡಿ ಕಂಡಕಂಡಲೆಲ್ಲಾ ಕೃಷಿ ಬೆಳೆ ಹಾಳುಮಾಡಿ ಭೀತಿ ಮೂಡಿಸಿದ್ದ ಕಾಡಾನೆ ಜನರಿಗೆ ಹಾನಿಯನ್ನುಂಟು ಮಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿತ್ತು. ಆನೆಯ ಸಂಚಾರದತ್ತ ನಿಗಾ ಇರಿಸಿ ನಾಗರಿಕರನ್ನು ಎಚ್ಚರಿಸುತ್ತಿದ್ದ ಅರಣ್ಯ ಹಾಗೂ ಪೊಲೀಸ್ ಇಲಾಖೆ ರಾತ್ರಿ ವೇಳೆ ಅನಗತ್ಯ ಸಂಚಾರ ಮಾಡದಂತೆ ವಿನಂತಿಸಿತ್ತು.

ಈ ಮಧ್ಯೆ ಹಿರೆಬಂಡಾಡಿ ಗ್ರಾಮ ವಾಸ್ತವ್ಯವನ್ನು ಕೊನೆಗೊಳಿಸಿದ ಕಾಡಾನೆ ಗುರುವಾರ ನಸುಕಿನ ವೇಳೆ ಕುಮಾರಧಾರಾ ನದಿ ದಾಟಿ ಕಾಡಿನ ಮಾರ್ಗದಲ್ಲಿ ಸಂಚರಿಸುವ ಮೂಲಕ ಹಿರೆಬಂಡಾಡಿ ಗ್ರಾಮದ ನಿವಾಸಿಗರನ್ನು ಭಯಮುಕ್ತಗೊಳಿಸಿದೆ.