ಜಿಲ್ಲೆ

ಕಾಡಾನೆ ಸೆರೆ ಕಾರ್ಯಾಚರಣೆ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಶನಿವಾರಸಂತೆ ಅರಣ್ಯ ಇಲಾಖೆ ಮೇಲಾಧಿಕಾರಿಗಳಿಂದ ಬುಧವಾರ ಅನುಮತಿ ಸಿಕ್ಕಿದ್ದು, ಅರಣ್ಯ ಅಧಿಕಾರಿಗಳ ತಂಡ ಕಾರ್ಯಾಚರಣೆ ಪ್ರಾರಂಭಿಸಿದೆ.
ಡಿಸಿಎಫ್ ಭಾಸ್ಕರ್ ನಿರ್ದೇಶನದಂತೆ ಎಸಿಫ್ ಗೋಪಾಲ್ ಮಾರ್ಗದರ್ಶನದಲ್ಲಿ ಶನಿವಾರಸಂತೆ ಆರ್‌ಎಫ್‌ಒ ಗಾನವಿ ನೇತೃತ್ವದಲ್ಲಿ ಕುಶಾಲನಗರ ಟಾಸ್ಕ್‌ಫೋರ್ಸ್‌ನ ನಾಲ್ವರು ಸಿಬ್ಬಂದಿ ಕಾಡಾನೆ ಮಾಲಂಬಿ ಅರಣ್ಯದಲ್ಲಿರುವುದನ್ನು ಪತ್ತೆಹಚ್ಚಿದ್ದಾರೆ.

ಆಲೂರು, ಬಾಣಾವಾರ, ದೊಡ್ಡಳ್ಳಿ, ಕಣಗಾಲು, ಕಂತೆಬಸನಳ್ಳಿ, ಕೂಡುರಸ್ತೆ ಗ್ರಾಮಗಳಲ್ಲಿ ಕಾಡಾನೆ ಓಡಾಟವಿರುವುದರಿಂದ ಗ್ರಾಮ ನಿವಾಸಿಗಳು ಬೆಳಗ್ಗೆ 7 ಗಂಟೆವರೆಗೆ ಹೊರಗೆ ಹೋಗಬಾರದು ಎಂದು ಆರ್‌ಎಫ್‌ಒ ಗಾನವಿ ಮನವಿ ಮಾಡಿದ್ದಾರೆ.

ಹೊಸಗುತ್ತಿ ಗ್ರಾಮದ ಕೃಷಿಕ ಜಗದೀಶ್(49) ಭಾನುವಾರ ಬೆಳಗ್ಗೆ ಸ್ಕೂಟಿಯಲ್ಲಿ ಹೋಗುವಾಗ ದಾಳಿ ಮಾಡಿದ ಒಂಟಿಸಲಗ ತುಳಿದು ಸಾಯಿಸಿತ್ತು. ಸೋಮವಾರ ಶನಿವಾರಸಂತೆ ಆರ್‌ಎಫ್‌ಒ ಕಚೇರಿ ಎದುರು ಕಾಫಿ ಬೆಳೆಗಾರರ ಸಂಘ ಮತ್ತು ರೈತಸಂಘದಿಂದ ಧರಣಿ ನಡೆಸಿ ಕಾಡಾನೆ ಸೆರೆ ಹಿಡಿದು ಸಾಗಿಸುವಂತೆ ಪಟ್ಟು ಹಿಡಿಯಲಾಗಿತ್ತು. ಮೃತರಿಗೆ 15ಲಕ್ಷ ರೂ. ಪರಿಹಾರ ನೀಡಿದ ಡಿಸಿಎಫ್ ಭಾಸ್ಕರ್ ಅವರು ಅನುಮತಿ ಸಿಕ್ಕಿದ ತಕ್ಷಣ ಕಾಡಾನೆ ಸೆರೆಹಿಡಿಯುವ ಭರವಸೆ ನೀಡಿದ್ದರು.