ಚನ್ನಪಟ್ಟಣ: ತಾಲೂಕಿನ ಗುಡ್ಡೆ ಅವೇರಹಳ್ಳಿಯಲ್ಲಿ ಹಸು ಮೇಯಿಸುತ್ತಿದ್ದ ಮಹಿಳೆಯ ಮೇಲೆ ಗುರುವಾರ ಕಾಡುಹಂದಿಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ.
ಗ್ರಾಮದ ಪುಟ್ಟಲಿಂಗಮ್ಮ (48) ಗಾಯಾಳು. ಎಂದಿನಂತೆ ಜಮೀನಿನಲ್ಲಿ ಹಸು ಮೇಯಿಸುವ ವೇಳೆ ಕಾಡುಹಂದಿ ಏಕಾಏಕಿ ದಾಳಿ ಮಾಡಿ, ಪುಟ್ಟಲಿಂಗಮ್ಮ ಅವರ ಕಾಲು ಹಾಗೂ ಎದೆಭಾಗಕ್ಕೆ ಗಾಯಗೊಳಿಸಿದೆ. ಗಾಯಾಳು ಪುಟ್ಟಲಿಂಗಮ್ಮ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರಕರಣ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಉಪ ಅರಣ್ಯ ಸಂರಣಾಧಿಕಾರಿ ರಾಮಕೃಷ್ಣಪ್ಪ ಹಾಗೂ ತಾಲೂಕು ವಲಯ ಅರಣ್ಯಾಧಿಕಾರಿ ಮಲ್ಲೆಶ್ ಗಾಯಾಳುವಿನ ಯೋಗೇಮ ವಿಚಾರಿಸಿ, ಇಲಾಖೆಯಿಂದ ಪರಿಹಾರ ನೀಡುವ ಭರವಸೆ ನೀಡಿದರು. ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಡಾನೆ ಜತೆ ಕಾಡುಹಂದಿಯ ಉಪಟಳ!
ತಾಲೂಕಿನ ಅರಣ್ಯಾದಂಚಿನ ಭಾಗಗಳಲ್ಲಿ ಇಷ್ಟು ದಿನ ಕಾಡಾನೆಗಳ ಸಮಸ್ಯೆ ಸಾಮಾನ್ಯವಾಗಿತ್ತು. ಆದರೆ ಈಗ ಕಾಡುಹಂದಿಗಳ ಉಪಟಳ ಜೋರಾಗಿದೆ. ಇತ್ತೀಚೆಗಷ್ಟೇ ಚಲಿಸುತ್ತಿದ್ದ ಆಟೋಕ್ಕೆ ಕಾಡುಹಂದಿ ಡಿಕ್ಕಿ ಹೊಡೆದ ಪರಿಣಾಮ, ಆಟೋ ಮಗುಚಿ ಬಿದ್ದು ಚಾಲಕ ಮೃತಪಟ್ಟಿದ್ದ.