ಜಿಲ್ಲೆ

ಕಾಡುಹಂದಿ ಉಪಟಳ ತೀವ್ರ: ಶಾರ್ಪ್‌ಶೂಟರ್ ಮೂಲಕ ನಿಗ್ರಹಿಸಲು ಮನವಿ

Avinash R

ಪುರುಷೋತ್ತಮ ಪೆರ್ಲ ಕಾಸರಗೋಡು

ನಾಡಿನೆಲ್ಲೆಡೆ ವನ್ಯಜೀವಿಗಳ ಉಪಟಳ ಹೆಚ್ಚಾಗುತ್ತಿರುವುದರಿಂದ ಕೃಷಿ ನಾಶದ ಜತೆಗೆ ಜೀವ ಸಂರಕ್ಷಣೆಯೂ ಜನತೆಗೆ ಸವಾಲಾಗುತ್ತಿದೆ. ಮಲೆನಾಡು ಪ್ರದೇಶದಲ್ಲಿ ಚಿರತೆ ಸಂಚಾರ, ಕಾಡಾನೆಗಳ ದಾಳಿಗಳಿಂದ ಜನತೆ ಭೀತಿಗೊಳಗಾಗಿದ್ದರೆ, ಕಾಡುಹಂದಿ, ಕೋತಿಗಳ ಉಪಟಳದಿಂದ ಕೃಷಿಹಾನಿ ಅನುಭವಿಸುತ್ತಿರುವ ರೈತರ ಮೊರೆ ಕೇಳುವವರಿಲ್ಲದ ಸ್ಥಿತಿ ಎದುರಾಗಿದೆ.

ಎಣ್ಮಕಜೆ ಪಂಚಾಯಿತಿಯ ಸೋಮಾಜೆ, ಸೇರಾಜೆ, ಪೂವನಡ್ಕ, ಬಾಳೆಮೂಲೆ, ವಾಣೀನಗರ, ಪಡ್ರೆ, ಗಾಳಿಗೋಪುರ ಪ್ರದೇಶದಲ್ಲಿ ವ್ಯಾಪಕವಾಗಿ ಕಾಡುಹಂದಿಗಳು ಕೃಷಿನಾಶಗೊಳಿಸುತ್ತಿದೆ. ವಾಣಿನಗರ, ಪಡ್ರೆ ಭಾಗದಲ್ಲಿ ಕಾಡುಹಂದಿಗಳ ಜತೆಗೆ ಕೋತಿಗಳ ಕಾಟ ವಿಪರೀತವಾಗುತ್ತಿದೆ. ಎಳೆಯ ಸೀಯಾಳ ಕಿತ್ತು ಹಾಕುತ್ತಿರುವ ಕೋತಿಗಳು ತೆಂಗು ಕೃಷಿಕರ ಪಾಲಿಗೆ ಭಾರಿ ಸಂಕಷ್ಟ ತಂದೊಡ್ಡುತ್ತಿದೆ. ಇನ್ನು ಕಾಡುಹಂದಿಗಳ ಉಪಟಳ ಗಣನೀಯವಾಗಿ ಹೆಚ್ಚಾಗಿದೆ. ಗೆಡ್ಡೆ, ಗೆಣಸಿನ ಜತೆಗೆ ಅಡಕೆ, ಬಾಳೆ, ತರಕಾರಿ ಸಹಿತ ವ್ಯಾಪಕವಾಗಿ ಕೃಷಿನಾಶಕ್ಕೆ ಕಾರಣವಾಗುವ ಕಾಡುಹಂದಿಗಳನ್ನು ನಿಗ್ರಹಿಸುವ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೃಷಿಕರ ಗೋಳು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕಾಡುಹಂದಿಗಳನ್ನು ನಾಡಿನೆಲ್ಲೆಡೆ ಬೇಟೆಯಾಡುತ್ತಿದ್ದ ಕಾಲಘಟ್ಟದಲ್ಲಿ ಬೆಳೆನಾಶಗೊಳಿಸುವ ಹಂದಿಗಳ ಉಪಟಳ ಕಡಿಮೆಯಾಗಿತ್ತು. ಅರಣ್ಯ ಇಲಾಖೆ ವನ್ಯಪ್ರಾಣಿಗಳ ಪರಿಪಾಲನೆಗೆ ಕಾನೂನು ಜಾರಿಗೊಳಿಸಿದಂದಿನಿಂದ ನಾಡಿನಲ್ಲಿ ನಿದ್ದೆಯಿಲ್ಲದ ದಿನಗಳೇ ಹೆಚ್ಚಾಗಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾರ್ಪ್‌ಶೂಟರ್ ಯೋಜನೆ ನನೆಗುದಿಗೆ

ನಾಡಿನಲ್ಲಿ ಕೃಷಿಗೆ ಹಾನಿಯೆಸಗುವ ಕಾಡುಹಂದಿಗಳನ್ನು ಶಾರ್ಪ್ ಶೂಟರ್‌ಗಳನ್ನು ಬಳಸಿ ನಿಗ್ರಹಿಸುವ ಯೋಜನೆಯೂ ಮೂಲೆಗುಂಪಾಗಿದೆ. ಬೆಳೆಗಳಿಗೆ ಹಾನಿ ಮಾಡುವ ಕಾಡುಹಂದಿಗಳನ್ನು ಶಾರ್ಪ್‌ಶೂಟರ್‌ಗಳನ್ನು ಬಳಸಿ ಕೊಲ್ಲುವ ಯೋಜನೆಗೆ ಕೆಲವೊಂದು ನಿಬಂಧನೆಗಳ ಮೂಲಕ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಈ ನಿಟ್ಟಿನಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಹಂದಿ ಬೇಟೆಯಾಡುವ ಯೋಜನೆ 2023ರಲ್ಲಿ ಜಾರಿಗೊಳಿಸಿದ್ದರೂ, ಕೆಲವೇ ದಿವಸಗಳಲ್ಲಿ ಇದು ಸ್ಥಗಿತಗೊಂಡಿತ್ತು. ಬೆಳೆಹಾನಿ ಜತೆಗೆ ಜೀವಹಾನಿಗೆ ಕಾರಣವಾಗುತ್ತಿರುವ ಕಾಡುಹಂದಿಗಳನ್ನು ಶಾರ್ಪ್‌ಶೂಟರ್‌ಗಳ ಮೂಲಕ ಕೊಂದು, ಅವುಗಳನ್ನು ಅರಣ್ಯ ಇಲಾಖೆ ನಿಬಂಧನೆಯಂತೆ ದಫನ ಮಾಡಬೇಕು. ಪರವಾನಗಿ ಹೊಂದಿರುವ ಶಾರ್ಪ್ ಶೂಟರ್‌ಗಳನ್ನು ಬಳಸಿ ಕೃಷಿನಾಶಗೊಳಿಸುವ ಕಾಡುಹಂದಿಗಳನ್ನು ಹತ್ಯೆ ಮಾಡುವ ಯೋಜನೆ ಇದಾಗಿದೆ.

ಕಾಡುಹಂದಿಗಳ ಉಪಟಳದಿಂದ ವ್ಯಾಪಕವಾಗಿ ಕೃಷಿ ಹಾನಿಯುಂಟಾಗುತ್ತಿದ್ದು, ಇದರಿಂದ ನಷ್ಟ ಅನುಭವಿಸಿಕೊಂಡು ಬರುತ್ತಿರುವ ಸಾಮಾನ್ಯ ಕೃಷಿಕರಿಗೆ ಇಂದು ಜೀವಭಯವೂ ಕಾಡಲಾರಂಭಿಸಿದೆ. ಹಾಡಹಗಲಲ್ಲಿ ಸಂಚಾರ ನಡೆಸುತ್ತಿರುವ ಕಾಡಹಂದಿಗಳು ಯಾವುದೇ ಸಮಯದಲ್ಲೂ ಜನರ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಗೆಡ್ಡೆ, ಗೆಣಸುಗಳ ಜತೆಗೆ ಬಾಳೆ, ಸಣ್ಣ ಅಡಕೆ ಸಸಿಗಳನ್ನೂ ಕಾಡಹಂದಿಗಳು ನಾಶಗೊಳಿಸುತ್ತಿದೆ. - ಗೋಪಾಲಕೃಷ್ಣ ಭಟ್ ಸೋಮಾಜೆ, ಪ್ರಗತಿಪರ ಕೃಷಿಕ ಶಾರ್ಪ್‌ಶೂಟರ್ ಬಳಸಿ ಕೃಷಿನಾಶ, ಜನರ ಜೀವಕ್ಕೆ ಹಾನಿಯೆಸಗುವ ಕಾಡುಹಂದಿಗಳನ್ನು ಹತ್ಯೆಮಾಡುವ ಯೋಜನೆ ಜಾರಿಯಲ್ಲಿದೆ. ಈ ಹಿಂದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾರ್ಪ್‌ಶೂಟರ್ ಬಳಸಿ ಹಂದಿಗಳನ್ನು ಹತ್ಯೆಮಾಡಲಾಗಿತ್ತು. ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ ಶಾರ್ಪ್‌ಶೂಟರ್‌ಗಳ ಕೊರತೆ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಯಿಂದ ಕರೆಸಲಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಹಂದಿಗಳು ಲಭ್ಯವಾಗದ ಹಾಗೂ ಅವುಗಳನ್ನು ದಫನ ಮಾಡುವ ವಿಚಾರದಲ್ಲಿ ಕಂಡುಬಂದ ಸಮಸ್ಯೆ ಹಿನ್ನೆಲೆಯಲ್ಲಿ ಯೋಜನೆ ಅಲ್ಪಾವಧಿಯಲ್ಲಿ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಕೃಷಿಕರು ಒಟ್ಟಾಗಿ ತೀರ್ಮಾನ ಕೈಗೊಂಡಲ್ಲಿ ಯೋಜನೆ ಮುಂದುವರಿಸಲು ಶ್ರಮಿಸಲಾಗುವುದು. - ಸೋಮಶೇಖರ ಜೆ.ಎಸ್, ಎಣ್ಮಕಜೆ ಗ್ರಾಪಂ ಅಧ್ಯಕ್ಷ https://www.vijayavani.net/janaushadha-center-at-punjalakatte https://www.vijayavani.net/padala-devala-brahmakalashotsava-from-18