ಗುಂಡ್ಲುಪೇಟೆ ತಾಲೂಕಿನ ಓಂಕಾರ್ ವಲಯದ ಅರಣ್ಯ ಪ್ರದೇಶದ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು. 
ಜಿಲ್ಲೆ

ಕಾಡಿನಿಂದ ಹೊರ ಬರುತ್ತಿವೆ ವನ್ಯಜೀವಿಗಳು

ಗುಂಡ್ಲುಪೇಟೆ: ಮಳೆ ಕೊರತೆಯಿಂದ ಅರಣ್ಯ ಪ್ರದೇಶದ ಕೆರೆಕಟ್ಟೆಗಳು ಬರಿದಾಗಿದ್ದು , ಕುಡಿಯುವ ನೀರಿಗಾಗಿ ಆನೆ ಸೇರಿದಂತೆ ಮುಂತಾದ ವನ್ಯಜೀವಿಗಳು ಹೊರಬರುತ್ತಿರುವುದು ಕಾಡಂಚಿನ ಗ್ರಾಮಗಳ ರೈತರ ನಿದ್ದೆಗೆಡಿಸಿದೆ.

ಕಳೆದ ವರ್ಷ ಸಮೃದ್ಧವಾಗಿ ಬಿದ್ದ ಮಳೆಯಿಂದ ತುಂಬಿ ಹರಿಯುತ್ತಿದ್ದ ಬಹುತೇಕ ಕೆರೆಗಳು ಈಗ ಬರಿದಾಗಿವೆ. ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯ ಪ್ರದೇಶದಲ್ಲಿ ಸಮರ್ಪಕ ಮಳೆ ಬೀಳದ ಪರಿಣಾಮ ಅರಣ್ಯದಲ್ಲಿರುವ 31 ಕೆರೆಗಳಲ್ಲಿ ಹೆಚ್ಚಿನ ಕೆರೆಕಟ್ಟೆಗಳು ಬತ್ತಿಹೋಗಿವೆ. ವರ್ಷ ಪೂರ್ತಿ ನೀರು ನಿಲ್ಲುತ್ತಿದ್ದ ಸೌತ್, ನಾರ್ಥ್ ಕೆರೆ, ಗುರುವೇಗೌಡನಕಟ್ಟೆ, ಶಾಂತೇಗೌಡನಕಟ್ಟೆ, ಹುಲಿಕಟ್ಟೆ ಹಾಗೂ ಬೋಳೇಗೌಡನಕಟ್ಟೆ ಸೇರಿದಂತೆ ಕೆಲವೇ ಕೆರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ಉಳಿದ 20 ಕ್ಕೂ ಹೆಚ್ಚಿನ ಕೆರೆಗಳು ಬತ್ತಿಹೋಗಿವೆ. ಇದರಿಂದ ಬಹುತೇಕ ವನ್ಯಜೀವಿಗಳು ಈಗಲೇ ಕಬಿನಿಯತ್ತ ವಲಸೆ ಹೋಗುತ್ತಿವೆ.

ಆನೆ, ಜಿಂಕೆ, ಕಾಟಿ ಮುಂತಾದ ಪ್ರಾಣಿಗಳು ಕಾಡಂಚಿನ ಜಮೀನುಗಳತ್ತ ಧಾವಿಸುತ್ತಿರುವ ಪರಿಣಾಮ ನಿತ್ಯ ಒಂದಲ್ಲ ಒಂದು ಕಡೆ ಬೆಳೆ ನಾಶವಾಗುತ್ತಿದೆ. ಅರಣ್ಯ ಸಿಬ್ಬಂದಿ ರಾತ್ರಿ ಗಸ್ತು ನಡೆಸುತ್ತಿದ್ದರೂ ಕಣ್ಣುತಪ್ಪಿಸಿ ಹೊರಬರುವ ಆನೆಗಳು ಹೊಸಪುರ, ಶ್ರೀಕಂಠಪುರ, ಯಡವನಹಳ್ಳಿ, ಚನ್ನವಡೆಯನಪುರ, ಹೊರೆಯಾಲ, ಕೋಟೆಕೆರೆ, ಆಲತ್ತೂರು, ಮಂಚಹಳ್ಳಿ, ಯಡಿಯಾಲ ಹಾಗೂ ನಂಜನಗೂಡು ತಾಲೂಕಿನ ಗ್ರಾಮಗಳತ್ತ ದಾಳಿ ಮಾಡುತ್ತಿವೆ. ಜತೆಗೆ ಜಮೀನುಗಳಿಗೆ ಅಳವಡಿಸಿದ ಮುಳ್ಳುತಂತಿ ಕೆಡವಿ ಬೆಳೆಗಳು, ಮನೆ, ಮರಗಳು ಹಾಗೂ ಕೃಷಿ ಉಪಕರಣಗಳನ್ನು ನಾಶಪಡಿಸುತ್ತಿವೆ.

ಪ್ರತಿ ವರ್ಷವೂ ಮಳೆ ಕೊರತೆ ಎದುರಿಸುತ್ತಿದ್ದ ಆಯ್ದ ಕೆರೆಗಳಿಗೆ ಐದು ವರ್ಷದ ಹಿಂದೆ ಅರಣ್ಯ ಇಲಾಖೆ ಕೊಳವೆ ಬಾವಿ ಕೊರೆಸಿ ಸೋಲಾರ್ ಮೋಟಾರು ಅಳವಡಿಸಿ ನೀರು ತುಂಬಿಸುವ ಮೂಲಕ ವನ್ಯಜೀವಿಗಳ ದಾಹ ತಣಿಸಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಲ್ಲಿ ಸಾಕಷ್ಟು ಮಳೆಬಿದ್ದು ಕೆರೆಗಳು ತುಂಬಿದ್ದರಿಂದ ಇವುಗಳ ನಿರ್ವಹಣೆಯನ್ನು ಕೈಬಿಡಲಾಗಿತ್ತು. ಇದರಿಂದ ಎಲ್ಲ ಸೋಲಾರ್ ಮೋಟಾರುಗಳು ಕೆಟ್ಟುಹೋಗಿದ್ದು ಬೇಸಿಗೆ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗದಂತಾಗಿದೆ.

ಈ ಬಾರಿ ಮಳೆ ಕೊರತೆಯಿಂದ ಶೇ.50ಕ್ಕೂ ಹೆಚ್ಚಿನ ಕೆರೆಗಳು ಬರಿದಾಗಿವೆ. ಸೋಲಾರ್ ಮೋಟಾರು ಅಳವಡಿಸಿದ್ದ ಕೆರೆಗಳಲ್ಲಿಯೂ ನಿರ್ವಹಣೆ ಮಾಡದೆ ಕೈಬಿಟ್ಟದಿಂದ ಮೋಟಾರುಗಳು ಕೆಟ್ಟುಹೋಗಿವೆ. ಇದರಿಂದ ರಾತ್ರಿ ವೇಳೆ ಎಷ್ಟೇ ಗಸ್ತು ನಡೆಸುತ್ತಿದ್ದರೂ ಆನೆ ಮುಂತಾದ ವನ್ಯಜೀವಿಗಳು ನಿತ್ಯ ಹೊರಬರುತ್ತಿವೆ.
ಕೆ.ಪಿ.ಸತೀಶ್ ಆರ್‌ಎಫ್‌ಒ, ಓಂಕಾರ್ ವಲಯ