ಜಿಲ್ಲೆ

ಬಾಡಿಗೆದಾರರ ಮನೆಯಲ್ಲಿ ಕಾಡು ಪ್ರಾಣಿ ಮಾಂಸ ಇಟ್ಟು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತಾನೆ ಸಿಕ್ಕಿಕೊಂಡ ಭೂಪ

chandru

ರಾಮನಗರ: ಕಾಡು ಪ್ರಾಣಿಗಳ ಮಾಂಸವನ್ನು ಮನೆಯಲ್ಲಿ ರಹಸ್ಯವಾಗಿ ಇಟ್ಟು ಬಾಡಿಗೆದಾರ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಲು ಮುಂದಾದ ವ್ಯಕ್ತಿ ತಾನೇ ಜೈಲುಪಾಲಾದ ಅಪರೂಪದ ಘಟನೆ ರಾಮನಗರದಲ್ಲಿ ನಡೆದಿದೆ.

ಟಿಪ್ಪುನಗರದ ಇಕ್ಬಾಲ್ ಕೃತ್ಯ ಎಸಗಿ ಈಗ ಜೈಲುವಾಸ ಅನುಭವಿಸುತ್ತಿದ್ದಾನೆ.  ಟಿಪ್ಪು ನಗರದಲ್ಲಿರುವ ಮನೆಯನ್ನು ಇಕ್ಬಾಲ್​ ಧಾರವಾಡ ಹಾಗೂ ಶಿವಮೊಗ್ಗದ ಇಬ್ಬರು ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಬಾಡಿಗೆ ನೀಡಿದ್ದ. ಮನೆ ಮಾಲೀಕರು ವಿದೇಶದಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಮನೆಯ ಉಸ್ತುವಾರಿಯನ್ನು ಇಕ್ಬಾಲ್​ ವಹಿಸಿಕೊಂಡಿದ್ದ.

ಈ ಮನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೂರು ವರ್ಷದಿಂದ ಬಾಡಿಗೆಗೆ ಇದ್ದರು. ಅವರನ್ನು ಖಾಲಿ ಮಾಡಿ ತಾನೆ ಅಲ್ಲಿ ವಾಸ ಇರಲು ನಿರ್ಧರಿಸಿದ್ದ. ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಲು ಆತ ಕಾಡು ಪ್ರಾಣಿಗಳ ಮಾಂಸವನ್ನು ಮನೆಯಲ್ಲಿ ಇಟ್ಟು ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ತಾನೆ ದೂರವಾಣಿ ಕರೆ ಮಾಡಿದ್ದ.

ವಿದ್ಯಾರ್ಥಿಗಳು ಕಾಡು ಪ್ರಾಣಿಗಳನ್ನು ಬೇಟೆ ಮಾಡಿ ಮನೆಯಲ್ಲಿ ಮಾಂಸಾಹಾರ ತಯಾರಿಸುತ್ತಾರೆ ದಾಳಿ ನಡೆಸಿ ಎಂದು ಹೇಳಿದ್ದ. ದಾಳಿ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಅನುಮಾನ ಬಂದು ಮನೆ ಸಮೀಪದಲ್ಲಿ ಇದ್ದ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ವಿದ್ಯಾರ್ಥಿಗಳ ಮನೆಯಲ್ಲಿ ಇಕ್ಬಾಲ್​ ಮಾಂಸ ಇಟ್ಟಿರುವುದು ಪತ್ತೆಯಾಗಿ ಆತನನನ್ನು ಬಂಧಿಸಿದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್​)