ಮೈಸೂರು: ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದೇನೆ. ಯದುವೀರ್ ಸರಳ ವ್ಯಕ್ತಿತ್ವ ಹೊಂದಿರುವವರು. ಅವರು ಬಹಳ ಕಷ್ಟು ಪಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಯದುವೀರ್ ಪತ್ನಿ ತ್ರಿಷಿಕಾ ಒಡೆಯರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯದುವೀರ್‌ಗೆ ಜನರು ಆಶೀರ್ವಾದ ಮಾಡುವ ವಿಶ್ವಾಸವಿದೆ. ಈ ಹಿಂದೆ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಅವರು ಮಾಡಿದ್ದಾರೆ. ಆ ಸಂದರ್ಭ ಕ್ಯಾಮರಾ ಇರಲಿಲ್ಲ, ಹೀಗಾಗಿ ಅದು ಗೊತ್ತಾಗುತ್ತಿರಲಿಲ್ಲ ಎಂದರು.
ಯದುವೀರ್ ಅವರು ನನ್ನೊಂದಿಗೆ ಪ್ರತಿದಿನವೂ ರಾಜಕಾರಣ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಸಹ ಯದುವೀರ್ ಜತೆಯಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಎಲ್ಲಿಂದ ಮಾತ್ರ ಅನ್ನುವುದು ಸಸ್ಪೆನ್ಸ್. ಈಗಾಗಲೇ ಪ್ರಚಾರಕ್ಕೆ ಹೋಗುವ ಬಗ್ಗೆ ತೀರ್ಮಾನ ಮಾಡಿದ್ದೇನೆ. ನಾನು ಈಗಾಗಲೇ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಕೆಲವು ಸಂಘಟನೆಗಳ ಮೂಲಕ ಪ್ರಚಾರ ಮಾಡುತ್ತಿದ್ದೇನೆ. ಖುದ್ದು ನಾನು ಪ್ರಚಾರಕ್ಕೆ ಬರಲು ವೇಳಾಪಟ್ಟಿ ಸಿದ್ಧವಾಗಿದೆ ಎಂದರು.