ಜಿಲ್ಲೆ

ಪತ್ನಿ ಸಾವು ಪತಿ ವಿರುದ್ಧ ದೂರು ದಾಖಲಿಸಿದ ಕುಟುಂಬಸ್ಥರು

Haveri - Kariyappa Aralikatti

ರಾಣೆಬೆನ್ನೂರ: ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಕುರಿತು ಆಕೆಯ ಪತಿಯ ವಿರುದ್ಧ ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಅಕ್ಷತಾ ಶರಣಬಸಪ್ಪ ಮುದಿಗೌಡ್ರ (23) ಮೃತ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಈಕೆಯ ಪತಿ ಶರಣಬಸಪ್ಪ ವೀರನಗೌಡ ಮುದಿಗೌಡ್ರ (37) ವಿರುದ್ಧ ದೂರು ದಾಖಲಾಗಿದೆ.
ದೂರು ನೀಡಿರುವ ಮೃತಳ ಸಂಬಂಧಿಕರು ‘ಅಕ್ಷತಾಳಿಗೆ ಮದುವೆ ಮಾಡಿಕೊಂಡು ಬಂದ ಬಳಿಕ ಕೆಲ ದಿನಗಳಿಂದ ವಿನಾಕಾರಣ ತೊಂದರೆ ಕೊಡುತ್ತಿದ್ದ. ಅಲ್ಲದೆ ಆಕೆಯ ಮೇಲೆ ಅನುಮಾನ ಪಡುತ್ತಿದ್ದ. ಮೇ 23ರಂದು ರಾತ್ರಿ ಅಕ್ಷತಾ ತಲೆ ಸುತ್ತಿ ಬಿದ್ದಿದ್ದು ಆಕೆಯನ್ನು ರಾಣೆಬೆನ್ನೂರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ತಿಳಿಸಿದ್ದ. ಆದರೆ, ನಾವು ಆಸ್ಪತ್ರೆಗೆ ಬಂದು ಕೇಳಿದಾಗ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಕೊರಳಿನಲ್ಲಿ ಕೆಂಪಾದ ಗಾಯದ ಗುರುತುಗಳಿವೆ. ಇದನ್ನು ನೋಡಿದರೆ ಶರಣಬಸಪ್ಪ ಆಕೆಯನ್ನು ನೇಣು ಹಾಕಿ ಕೊಲೆ ಮಾಡಿ ಈಗ ಆಸ್ಪತ್ರೆಗೆ ತಂದಿದ್ದಾನೆ ಎನ್ನುವ ಅನುಮಾನವಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.