ಜಿಲ್ಲೆ

ಪತಿ ಜೈಲಿಗೆ ಹೋಗಿಬಂದ ವಿಷಯ ತಿಳಿದು ಪತ್ನಿ ಆತ್ಮಹತ್ಯೆ


ಕೊಳ್ಳೇಗಾಲ : ಹಣ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪತಿ ಜೈಲಿಗೆ ಹೋಗಿ ಬಂದ ವಿಷಯ ತಿಳಿದ ಪತ್ನಿ ಬೇಸರಗೊಂಡ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. ತಾಲೂಕಿ ಮುಳ್ಳೂರು ಗ್ರಾಮದ ಸುರೇಶ ನಾಯಕ ಎಂಬುವರ ಪತ್ನಿ ಯಶೋದಾ (55) ಮೃತ.


ಸುರೇಶನಾಯಕ ಹಾಗೂ ಯಶೋದಾ 25 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ಊರಿನಲ್ಲಿ ಮನೆ ಕಟ್ಟಿರುವ ಸಾಲದ ಹಣವನ್ನು ತೀರಿಸುವ ಸಲುವಾಗಿ ಸುರೇಶನಾಯಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಯಶೋದಾ ಮಳ್ಳೂರಿನಲ್ಲೇ ವಾಸವಿದ್ದರು. ಸುರೇಶ್‌ನಾಯಕ ವಾರಕ್ಕೆ ಒಂದು ಬಾರಿ ಬಂದು ಹೋಗುತ್ತಿದ್ದರು.


ಸುರೇಶನಾಯಕ ಬೆಂಗಳೂರಿನ ತಲಘಟ್ಟಪುರದ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಬಂಕ್‌ನ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುರೇಶನಾಯಕ ಕೆಲ ದಿನ ಜೈಲಿನಲ್ಲಿ ಇರಬೇಕಾಗಿತ್ತು.
ಸುರೇಶ್‌ನಾಯಕ ಊರಿಗೆ ಬಂದಾಗ ಪತ್ನಿಗೆ ಈ ವಿಷಯ ತಿಳಿಸಿದ್ದಾರೆ. ಅಲ್ಲದೆ ಈ ಪ್ರಕರಣದ ವಿಚಾರವಾಗಿ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಪತ್ನಿ ಯಶೋದಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.