ಜಿಲ್ಲೆ

ಶೀಘ್ರ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಿ

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ಚಿಕ್ಕಮಗಳೂರಿನ ಮೂಗ್ತಿಹಳ್ಳಿಯಿಂದ ಹ್ಯಾಂಡ್‌ಪೋಸ್ಟ್ ವರೆಗಿನ 26 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಶೀಘ್ರ ಅಗಲೀಕರಣ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿದ್ತ್ ಮತ್ತು ವಾಹನ ಚಾಲಕರ ಸಂಘಟನೆಯಿಂದ ಶುಕ್ರವಾರ ಪಟ್ಟಣದ ಬಸ್‌ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಮಾತನಾಡಿ, ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ 410 ಕೋಟಿ ರೂ. ಅನುದಾನ ಬಿಡುಗಡೆಯಾಗಿ 6 ತಿಂಗಳು ಕಳೆದರೂ ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಸಂಸದರು ಮತ್ತು ಶಾಸಕರು ಇದರ ಬಗ್ಗೆ ಮಾತನಾಡುತ್ತಿಲ್ಲ. ಹೆದ್ದಾರಿ ಗುಂಡಿಯಾಗಿ ವಾಹನಗಳು ಸಂಚರಿಸುವಂತಿಲ್ಲ. ಕಡೂರಿನಿಂದ ಚಿಕ್ಕಮಗಳೂರಿನ ಮೂಗ್ತಿಹಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿ 2 ವರ್ಷ ಕಳೆದಿದೆ. ಮುಂದುವರಿದು ಮೂಡಿಗೆರೆವರೆಗೆ 26 ಕಿ.ಮೀ. ಅಗಲೀಕರಣಕ್ಕೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳ ಈ ವರ್ತನೆ ಸರಿಯಲ್ಲ. ಕೂಡಲೇ ಹೆದ್ದಾರಿ ಅಗಲೀಕರಣಕ್ಕೆ ಮುಂದಾಗದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ತಾಲೂಕು ಕರವೇ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು 2012ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. 13 ವರ್ಷ ಕಳೆದರೂ ರಸ್ತೆ ಗುಂಡಿಯನ್ನೂ ಮುಚ್ಚಲೂ ಹೆದ್ದಾರಿ ಪ್ರಾಧಿಕಾರ ಮುಂದಾಗಿಲ್ಲ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿ ವಾಹನಗಳು ಸಂಚರಿಸಲು ಹರಸಹಾಸ ಪಡುವಂತಾಗಿದೆ. ಬದಿಯಲ್ಲಿ ಬೃಹತ್ ಹೊಂಡವಿದ್ದರೂ ಅದಕ್ಕೆ ತಡೆಗೋಡೆ ನಿರ್ಮಿಸಿಲ್ಲ. ರಸ್ತೆ ಅಗಲೀಕರಣಕ್ಕೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದರೂ ಅದನ್ನು ಬಳಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ರೈತ ಸಂಘದ ತಾಲೂಕ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮಾಜಿ ಅಧ್ಯಕ್ಷ ಡಿ.ಎಸ್.ರಮೇಶ್, ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ, ಕನ್ನಡಪರ ಸಂಘಟನೆಗಳ ಮುಖಂಡ ಹೊರಟ್ಟಿ ರಘು, ಮಹಿಳಾ ರೈತ ಸಂಘದ ರಾಜ್ಯ ಕಾರ್ಯದರ್ಶಿ ವನಶ್ರೀ ಲಕ್ಷ್ಮಣಗೌಡ, ಮುಖಂಡರಾದ ಯಾಕೂಬ್, ಅಭಿಜಿತ್ ಹೆಡೆದಾಳು, ಅಶ್ರಫ್, ಇಬ್ರಾಹಿಂ, ಸನಾ ಇತರರಿದ್ದರು.