ವಿಜಯಪುರ: ಕನ್ನಡದ ಪ್ರತಿಷ್ಠಿತ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ನಾಡಿನ ಪ್ರತಿಷ್ಠಿತ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಎಜುಕೇಶನ್ ಎಕ್ಸಪೋ- 2024 ಯಶಸ್ವಿ ಮುನ್ನಡೆ ಸಾಧಿಸಿದೆ.
ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆಯುತ್ತಿರುವ ಮೂರು ದಿನದ ಎಕ್ಸಪೋದ ಎರಡನೇ ದಿನವಾದ ಮಂಗಳವಾರ ನಗರ ಹಾಗೂ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಆಗಮಿಸುತ್ತಿದ್ದಾರೆ. ಮಾತ್ರವಲ್ಲ ನೆರೆಯ ಜಿಲ್ಲೆ ಹಾಗೂ ಮಹಾರಾಷ್ಟ್ರ ದ ಗಡಿಭಾಗದ ವಿದ್ಯಾರ್ಥಿಗಳು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ.
ಅಗಸ್ತ್ಯ ಫೌಂಡೇಶನ್ ವತಿಯಿಂದ ಆಯೋಜಿಸಿರುವ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದರೆ, ನಾಡಿನ ಪ್ರತಿಶಿಷ್ಠಿತ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ಸಾಧನೆ, ಕಲಿಕೆ ಗುಣಮಟ್ಟ, ನುರಿತ ಶಿಕ್ಷಕರು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿವೆ. ಖ್ಯಾತ ಶಿಕ್ಷಣ ತಜ್ಞರ ಉಪನ್ಯಾಸ, ಕಾರ್ಯಾಗಾರ, ಸಂವಾದ ಕಾರ್ಯಕ್ರಮಗಳು ಶಿಕ್ಷಣಾಸಕ್ತರನ್ನು ಬರಸೆಳಯುತ್ತಿದ್ದು ಜನ ಮುಗಿಬಿದ್ದು ಜ್ಞಾನದಾಹ ತಣಿಸಿಕೊಳ್ಳುತ್ತಿದ್ದಾರೆ.
ಸ್ಪಷ್ಟ ಗುರಿ, ಸೂಕ್ತ ಮಾರ್ಗದರ್ಶನ, ಸತತ ಪ್ರಯತ್ನವೊಂದಿದ್ದರೆ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಡಾ. ವಿಜಯ ಸಂಕೇಶ್ವರ, ವರ್ಗಿಸ್ ಕುರಿಯನ್ ಮತ್ತಿತರ ಸಾಧಕರೇ ಸಾಕ್ಷಿ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ವೇದ ಅಕಾಡೆಮಿ ಅಧ್ಯಕ್ಷ ಶಿವಾನಂದ ಕೆಲೂರ ಹೇಳಿದರು.
ಎಜುಕೇಷನ್ ಎಕ್ಸಪೋದ ಎರಡನೇ ದಿನ ಮಂಗಳವಾರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಅವರು ಉಪನ್ಯಾಸ ನೀಡಿದರು. ಅತ್ಯಂತ ಕಡುಕಷ್ಟದಲ್ಲಿ ಲಾರಿ ಚಾಲಕನಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಒಂದು ಲಾರಿಯನ್ನೇ ಸಾವಿರಾರು ಲಾರಿಯನ್ನಾಗಿ ಬೆಳೆಸಿದ ಪ್ರತಿಷ್ಠಿತ ಉದ್ಯಮಿ ವಿಜಯ ಸಂಕೇಶ್ವರ ನಮಗೆಲ್ಲರಿಗೂ ಮಾದರಿಯಾಗಬೇಕೆಂದರು.