ಹುಬ್ಬಳ್ಳಿ: ‘ನಾಡು ಹೋಗು ಎನ್ನುತ್ತೆ ಕಾಡು ಬಾ ಎನ್ನುತ್ತೆ’ ಈ ವಯಸ್ಸಿನಲ್ಲಿ ಯಾಕ್ ಬೇಕ್ರಿ ನಿಮಗೆಲ್ಲ…?
ಮಾದಕ ವಸ್ತುಗಳ ಬಳಕೆದಾರರ ಮಾಹಿತಿ ಸಂಗ್ರಹ ಹಾಗೂ ಪಾಲಕರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರೆದಿದ್ದ ಸಭೆಯಲ್ಲಿ, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ವೃದ್ಧರೊಬ್ಬರಿಗೆ ಹೀಗೆ ಪ್ರಶ್ನೆ ಮಾಡಿದರು.
ನಿಮಗೆ ವಯಸ್ಸಾಗಿದೆ. ಈ ಮಾದಕ ವಸ್ತುಗಳ ವ್ಯಸನ ಬಿಟ್ಟು ಬಿಡಿ. ಆರಾಮಾಗಿ ಊಟ ಮಾಡಿಕೊಂಡು ಇರಿ. ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಮಾದಕ ವಸ್ತುಗಳ ಬಳಕೆದಾರರು ಹಾಗೂ ಅವರ ಪಾಲಕರನ್ನು ಇದ್ದಲ್ಲಿಗೆ ಹೋಗಿ ಮಾತನಾಡಿಸಿದ ಆಯುಕ್ತರು, ಕೆಲವರಿಗೆ ಬೈದರು. ಇನ್ನೂ ಕೆಲವರಿಗೆ ಮಾದಕ ವಸ್ತುಗಳ ವ್ಯಸನದಿಂದ ಆಗಲಿರುವ ಆರೋಗ್ಯ ಹಾನಿ ಕುರಿತು ಪಾಠ ಮಾಡಿದರು. ನಿಮ್ಮ ಮಕ್ಕಳು ಮಾತು ಕೇಳದಿದ್ದರೆ ನಮ್ಮ ಪೊಲೀಸರಿಗೆ ಫೋನ್ ಕರೆ ಮಾಡಿ ಎಂದು ತಿಳಿವಳಿಕೆ ನೀಡಿದರು.
12 ಡ್ರಗ್ ಪೆಡಲರ್‌ಗಳ ಮೇಲೆ ಪ್ರಕರಣ: ಕಳೆದ ಒಂದು ತಿಂಗಳಲ್ಲಿ ಹು-ಧಾ ಅವಳಿ ನಗರದಲ್ಲಿ 750ಕ್ಕೂ ಹೆಚ್ಚು ಜನ ಮಾದಕ ವಸ್ತುಗಳ ಬಳಕೆದಾರರನ್ನು ವಶಪಡಿಸಿಕೊಂಡು ತಪಾಸಣೆ ಮಾಡಲಾಗಿದೆ. 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 12 ಡ್ರಗ್ ಪೆಡಲರ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, 66 ಜನರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಳೆದ ವಾರ ಬಳಕೆದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. 399 ಜನ ಅನುಮಾನಸ್ಪದ ಮಾದಕ ವ್ಯಸನಿಗಳನ್ನು ತಪಾಸಣೆ ಮಾಡಲಾಗಿತ್ತು. 254 ಪಾಸಿಟಿವ್ ಪ್ರಕರಣ ದಾಖಲಾಗಿದ್ದವು. ಭಾನುವಾರ 467 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 251 ಜನರು ಮಾದಕ ವ್ಯಸನಿಗಳಾಗಿದ್ದಾರೆ ಎಂಬುದು ಪರೀಕ್ಷೆಯಿಂದ ದೃಢವಾಗಿದೆ. 44 ಪ್ರಕರಣ ದಾಖಲಾಗಿವೆ ಎಂದರು.
ಅವಳಿ ನಗರದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಭೆ ಮಾಡಿದ್ದೇವೆ. ಡ್ರಗ್ಸ್ ಮುಕ್ತ ಅವಳಿ ನಗರ ಮಾಡಲು ಕೈಜೋಡಿಸುವುದಾಗಿ ತಿಳಿಸಿದ್ದಾರೆ. ಈಗ ಸಿಕ್ಕಿರುವ ಬಳಕೆದಾರರ ಪಾಲಕರನ್ನೂ ಕರೆಯಲಾಗಿದೆ. ಅವರಿಗೆ ತಿಳಿವಳಿಕೆ ನೀಡಲಾಗುವುದು. ನಮ್ಮ ಪೊಲೀಸರು ಕೂಡ ಫಾಲೋ ಅಪ್ ಮಾಡುವರು. ಹೈಪ್ರೊಫೈಲ್ ಗಾಂಜಾ ಬಳಕೆದಾರರು, ಲೋ ಪ್ರೊಫೈಲ್ ಬಳಕೆದಾರರು ಎಂದಿರುವುದಿಲ್ಲ. ಎಲ್ಲರನ್ನೂ ಪತ್ತೆ ಹಚ್ಚುವ ಕಾರ್ಯ ಮತ್ತು ಅಭಿಯಾನ ಮುಂದುವರಿಯಲಿದೆ ಎಂದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ ಇತರರಿದ್ದರು.