ತೀರ್ಥಹಳ್ಳಿಯಲ್ಲಿ ಗುರುವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ. 
ಜಿಲ್ಲೆ

ಸಭಾ ನಡಾವಳಿ ತಿರುಚುವುದೇಕೆ?

Shivamogga - Desk - Megha MS

ತೀರ್ಥಹಳ್ಳಿ: ಜೂನ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯ ಸದಸ್ಯರ ತೀರ್ಮಾನದಂತೆ ಸಭಾ ನಡಾವಳಿ ದಾಖಲಿಸಿಲ್ಲ. ನಡಾವಳಿಯನ್ನು ತಿರುಚಿ ಬರೆಯುವುದಾದರೆ ಸಭೆಯ ಅಗತ್ಯವೇನು ಎಂದು ಗುರುವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಸಂದೇಶ ಜವಳಿ ಪ್ರಶ್ನಿಸಿದರು.

ಪಾರ್ವತಿ ಬಡಾವಣೆಯಲ್ಲಿ ಅಕ್ರಮ ಶೆಡ್ ನಿರ್ಮಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಅನಧಿಕೃತ ಒತ್ತುವರಿ ಪರಿಶೀಲನೆಗೆ ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕರಿಂದ(ಎಡಿಎಲ್‌ಆರ್) ಸರ್ವೇ ಮಾಡಿಸಬೇಕು ಎಂದು ಸಭೆ ನಿರ್ಣಯಿಸಿತ್ತು. ಯಾರದ್ದೋ ಲಾಚಿಜಿಗೆ ಪಟ್ಟಣ ಪಂಚಾಯಿತಿ ಬಲಿಕೊಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಅಧ್ಯಕ್ಷೆ ಸುಶೀಲಾ ಶೆಟ್ಟಿ ಮಾತನಾಡಿ, ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಪುನಃ ಸಭೆ ಸೇರಿಸಿ ಹೊಸ ನಡಾವಳಿ ರಚಿಸಲಾಗುತ್ತದೆ. ಸತ್ಯಾಸತ್ಯತೆ ತಿಳಿದುಕೊಂಡು ತಪ್ಪುಗಳನ್ನು ಸರಿಪಡಿಸುತ್ತೇವೆ. ಸಭೆಯ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಟ್ಟಣ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 6.5 ಕೋಟಿ ರು. ಅನುದಾನ ಬಿಡುಗಡೆಯಾಗಿತ್ತು. ಆಡಳಿತಾತ್ಮಕ ಅನುಮೋದನೆ ದೊರೆಯದೆ ಹಣ ಬಿಡುಗಡೆಯಾಗಿಲ್ಲ. ಅನುದಾನದ ಕೊರತೆಯಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ ಸಭೆಯ ಗಮನ ಸೆಳೆದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು ಸರ್ಕಾರ ಗ್ಯಾರಂಟಿ ಯೋಜನೆಗೆ ಅನಗತ್ಯ ಹಣ ನೀಡುತ್ತಿದೆ ಎಂದು ದೂರಿದರು.
ಒಂದೂ ಜನಪರ ಕಾರ್ಯಕ್ರಮ ನೀಡದ ಬಿಜೆಪಿ ಸುಳ್ಳುಗಳ ಆಧಾರದಲ್ಲಿ ಅಧಿಕಾರ ಹಿಡಿದಿತ್ತು. ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ, ಅನುದಾನಕ್ಕೆ ಅಂಗಲಾಚಬೇಕಿತ್ತು. ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಸ್ವಲ್ಪ ಕಾಲಾವಕಾಶ ಬೇಕು. ಗ್ಯಾರಂಟಿ ಯೋಜನೆ ಸಾಮಾನ್ಯ ಜನರಿಗೆ ತಲುಪುತ್ತಿರುವುದು ಸಹಿಸಲಾಗದೆ ಕೊಂಕು ಎತ್ತುವ ಹುನ್ನಾರ ಸರಿಯಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಸದಸ್ಯರಾದ ಜಯಪ್ರಕಾಶ್, ರತ್ನಾಕರ ಶೆಟ್ಟಿ, ಬಿ.ಗಣಪತಿ ತಿರುಗೇಟು ನೀಡಿದರು.
ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ, ಪರವಾನಗಿ ಇಲ್ಲದ ಬಡಪಾಯಿಗಳ ಗೂಡಂಗಳಿಗಳನ್ನು ತೆರವುಗೊಳಿಸುತ್ತೀರಿ. ಆದರೆ ಶ್ರೀಮಂತರು ನಿರ್ಮಿಸಿರುವ ಸುಮಾರು 24 ಬಹು ಅಂತಸ್ತಿನ ಕಟ್ಟಡಗಳಿಗೆ ಅವಕಾಶ ನೀಡಿದ್ದೀರಿ ಎಂದು ದೂರಿದರು. ಈ ಬಗ್ಗೆ ವಿವರಣೆ ನೀಡಿದ ಅಧ್ಯಕ್ಷರು, ರಾಷ್ಟ್ರೀಯ ಹೆದ್ದಾರಿಯ ನಿಗದಿತ ಅಳತೆಯ ಒಳಗೆ ಪಟ್ಟಣ ಪಂಚಾಯಿತಿಯಿಂದ ಪರವಾನಗಿ ನೀಡಲು ಅವಕಾಶ ಇರುವುದಿಲ್ಲ. ಪರವಾನಗಿ ಪಡೆಯದೆ ನಿರ್ಮಿಸಲಾಗಿರುವ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಬಹುದಾಗಿದೆ ಎಂದರು.
ಮುಖ್ಯಾಧಿಕಾರಿ ಕುರಿಯಕೊಸ್ ಇದ್ದರು.

ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಲ್ಲಿ ಮಾತ್ರ ಸ್ವಚ್ಛತೆ
ಕೆಲ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಲ್ಲಿ ಮಾತ್ರ ನಿರಂತರ ಸ್ವಚ್ಛತೆ ಮಾಡಲಾಗುತ್ತಿದೆ. ಬಾಳೇಬೈಲಿನಲ್ಲಿ ರಾಜಕಾಲುವೆಗಳು ಮುಚ್ಚಿದ್ದರೂ ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಾವುಗಳು ಎಲ್ಲೆಂದರಲ್ಲಿ ಓಡಾಡುತ್ತಿದ್ದು ಜನರು ಆತಂಕದಲ್ಲಿ ಬದುಕುತ್ತಿದ್ದಾರೆ. ಸದಸ್ಯರ ಮನೆಯ ಮುಂಭಾಗದಲ್ಲಿ ಮಾತ್ರ ಬ್ಲೀಚ್ ಹಾಕಲಾಗುತ್ತಿದ್ದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದು ಸದಸ್ಯರಾದ ಯತಿರಾಜ್, ರವೀಶ್ ದೂರಿದರು.