ಬೆಳಗಾವಿ: ಕೆಲವು ದಿನಗಳಿಂದ ಹಾಸನ ಸಂಸದ ಪ್ರಜ್ವಲ ರೇವಣ್ಣ ಅವರ ವಿಡಿಯೋ ಹರಿದಾಡುತ್ತಿವೆ. ಇದು ರಾಜ್ಯ, ದೇಶ ತಲೆತಗ್ಗಿಸುವ ಕೆಲಸವಾಗಿದೆ. ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡಕ್ಕೆ ನೂರಾರು ಅಮಾಯಕ ಮಹಿಳೆಯರು ಬಲಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಅವರ ನಿಲುವು ಏನು ಎಂದು ತಿಳಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ? ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಭಾರೀ ಆಸಕ್ತಿ ತೋರಿಸಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಬೆಳಗಾವಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರೇ ಈಗಲೂ ಸಂತ್ರಸ್ತ ಮಹಿಳೆಯರ ಪರ ಧ್ವನಿ ಎತ್ತಿ ಎಂದರು.
ನಾರಿ ಶಕ್ತಿ, ನಾರಿ ಸಮ್ಮಾನ, ಬೇಟಿ ಬಚಾವ್, ಬೇಟಿ ಪಡಾವ್ ಅಂತ ಹೇಳುವ ಬಿಜೆಪಿಗರು, ಈಗ ಯಾಕೆ ಮೌನವಾಗಿದ್ದಾರೆ? ವಿದೇಶದಿಂದ, ಹೊರ ರಾಜ್ಯಗಳಿಂದ ಫೋನ್ ಕರೆಗಳು ಬರುತ್ತಿವೆ. ಇಂತಹ ಪ್ರಕರಣ ನಡೆದಿದ್ದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಲೇ ಎಸ್‌ಐಟಿ ತನಿಖೆಗೆ ವಹಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿಯ ಮಹಿಳಾ ಮಣಿಗಳು ಎಲ್ಲಿದ್ದಾರೆ. ಸಂಸದೆ ಮಂಗಲಾ ಅಂಗಡಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಗಬೇಕು. ನೇಹಾ ಹಿರೇಮಠ ವಿಷಯದಲ್ಲಿ ಮಾತಾಡಿದಂತೆ ಜಗದೀಶ ಶೆಟ್ಟರ್ ಅವರು ಮಾತಾಡಬೇಕು. 16 ವರ್ಷದಿಂದ 50, 60 ವರ್ಷದ ಮಹಿಳೆಯರು ಪ್ರಜ್ವಲ್ ರೇವಣ್ಣ ಅವರಿಂದ ನೊಂದಿದ್ದಾರೆ. ಮಹಿಳೆಯರ ಪರ ಮೈತ್ರಿ ನಾಯಕರು ನಿಲ್ಲಲಿ ಎಂದು ಹೇಳಿದರು.
ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ, ಹಿರಿಯ ಮುಖಂಡ ಎ.ಟಿ.ರಾಮಸ್ವಾಮಿ, ದೇವರಾಜ್‌ಗೌಡ ಎಂಬುವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮೈಸೂರು ಪ್ರವಾಸದಲ್ಲಿದ್ದ ಅಮಿತ್ ಷಾ ಅವರ ಗಮನಕ್ಕೆ ಆಗಲೇ ತಂದಿದ್ದರು. ಇಂತಹ ವಿಷಯ ಗೊತ್ತಿದ್ದರೂ ಮೈತ್ರಿ ನಾಯಕರು ಪ್ರಜ್ವಲ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದು ಎಷ್ಟು ಸರಿ. ಪ್ರಜ್ವಲ್ ಪ್ರಕರಣದ ಕುರಿತು ಬಿಜೆಪಿ ನಾಯಕರಿಗೆ ಮೊದಲೇ ಅರಿವಿತ್ತು ಎಂದೂ ಸಚಿವರು ಹೇಳಿದರು.
ಅಶೋಕ, ವಿಜಯೇಂದ್ರ ಅವರೇ ಈಗ ಏನು ಹೇಳುತ್ತೀರಾ, ಶೋಭಾ ಕರಂದ್ಲಾಜೆ, ಸ್ಮತಿ ಇರಾನಿ ಅವರು ಯಾಕೆ ಏನು ಹೇಳುತ್ತಿಲ್ಲ. ಮಂಡ್ಯ ಸೊಸೆ ಸುಮಲತಾ ಏನ್ ಮಾಡುತ್ತಿದ್ದಾರೆ. ಸರ್ಕಾರ ನೊಂದ ಮಹಿಳೆಯರ ಪರವಾಗಿ ನಿಲ್ಲಲಿದೆ. ಅವರ ರಕ್ಷಣೆ ಮಾಡಲಿದೆ. ಪ್ರಕರಣದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಜ್ವಲ್ ಪ್ರಕರಣದ ವಿಡೀಯೋಗಳನ್ನು ಯಾರೂ ಫಾರ್ವರ್ಡ್ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು.
ಸಚಿವ ಡಾ.ಎಂ.ಸಿ.ಸುಧಾಕರ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.