ಜಿಲ್ಲೆ

ಕಾಂತರಾಜ ವರದಿ ಸರ್ಕಾರದ ಕೈ ಸೇರುವ ಮೊದಲೇ ವಿರೋಧವೇಕೆ?

ಮೈಸೂರು: ಎಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇನ್ನೂ ಸರ್ಕಾರದ ಕೈಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಮಾಡೋದು ಎಷ್ಟು ಸರಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿ ಜಾತಿಗಣತಿ ಅಲ್ಲ, ಅದು ಸಮೀಕ್ಷೆ. ಕೇವಲ ಒಂದು ಸಮುದಾಯದ ಪರವಾಗಿ ಮಾಡಿಲ್ಲ. ಪ್ರತಿಯೊಂದು ಸಮುದಾಯದಲ್ಲಿರುವ ಬಡಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಾಗಿದೆ ಎಂದು ಹೇಳಿದರು.


ಎಚ್.ಡಿ.ಕುಮಾರಸ್ವಾಮಿ ಸಿಎಂ, ಆರ್.ಅಶೋಕ್ ಡಿಸಿಎಂ ಆಗಿದ್ದವರು. ಹೇಳಿಕೆ ನೀಡುವಾಗ ಸಂವಿಧಾನದ ಚೌಕಟ್ಟಿನ ಒಳಗೆ ನೀಡಬೇಕು. ಆರ್.ಅಶೋಕ್ ಪ್ರತಿಪಕ್ಷ ನಾಯಕರಾಗಿದ್ದಾರೆ. ಏನೇನೋ ಹೇಳಿಕೆ ನೀಡೋದಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಕಿಡಿಕಾರಿದರು.


ಕಾಂತರಾಜ್ ವರದಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡಬೇಕು. ನಂತರ ಅದನ್ನು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದರು.


ಶಾಸಕರು ಮತ್ತು ಸಚಿವರ ನಡುವೆ ಸಮನ್ವಯ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯದಿರುವುದೇ ಇದಕ್ಕೆಲ್ಲ ಕಾರಣ. ಶಾಸಕರು ತಮ್ಮ ಅಭಿಪ್ರಾಯಗಳನ್ನು ಹೇಳುವ ಹಾಗಿಲ್ಲವೇ? ಸಚಿವರು ಶಾಸಕರಿಗೆ ಸ್ಪಂದಿಸದಿದ್ದಾಗ ಹೇಳಿಕೆ ನೀಡುತ್ತಾರೆ.

ಕೆಲವೊಂದು ವಿಚಾರಗಳನ್ನು ಪಕ್ಷದ ಚೌಕಟ್ಟಿನ ಒಳಗೆ ಮಾತನಾಡಬೇಕು. ಶಾಸಕ ಬಿ.ಆರ್.ಪಾಟೀಲ್ ಅವರನ್ನು ಸಿಎಂ ಕರೆದು ಮಾತನಾಡಿದ್ದಾರೆ. ಎಲ್ಲವೂ ಸರಿಹೋಗಿದೆ ಎಂದು ಹೇಳಿದರು.