ಜಿಲ್ಲೆ

ಕಟ್ಟಿಗೆ ನಾಪತ್ತೆ ಪ್ರಕರಣ ತನಿಖೆಗೆ ಏಕೆ ವಿಳಂಬ

ಮುಂಡಗೋಡ: ಪಟ್ಟಣದ ಮರಮಟ್ಟು ಸಂಗ್ರಹಾಲಯ (ಕಟ್ಟಿಗೆ ಡಿಪೋ)ದಿಂದ ಕಟ್ಟಿಗೆ ನಾಪತ್ತೆಯಾದ ಪ್ರಕರಣ ನಡೆದು ಒಂದು ವರ್ಷ ಎರಡು ತಿಂಗಳು ಕಳೆದರೂ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸದೆ ಹಿರಿಯ ಅಧಿಕಾರಿಗಳ ವಿಳಂಬ ನೀತಿ ಅನುಸರಿಸು ತ್ತಿರುವುದು ಸಾರ್ವಜನಿಕರಲ್ಲಿ ಸಂಶಯ ಮೂಡುವಂತೆ ಮಾಡಿದೆ.

2023ರ ಜೂನ್ 9ರಂದು ಮರಮಟ್ಟು ಸಂಗ್ರಹಾಲಯ (ಕಟ್ಟಿಗೆ ಡಿಪೋ)ದಿಂದ ಎರಡು ಲಾರಿಗಳಲ್ಲಿ ಅಕ್ರಮವಾಗಿ 20 ಲಕ್ಷ ರೂ. ಮೌಲ್ಯದ ಸಾಗವಾನಿ, ಮತ್ತಿ, ಕಿಂದಳ, ದಾಮನ್ ನಾಟಾಗಳನ್ನು ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಶಿರಸಿ ಸನಿಹದ ಎಕ್ಕಂಬಿ ಚೆಕ್​ಪೋಸ್ಟ್​ನಲ್ಲಿ ಶಿರಸಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಕಟ್ಟಿಗೆ ಡಿಪೋದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಅಕ್ರಮವಾಗಿ ಕಟ್ಟಿಗೆ ಸಾಗಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಐವರು ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಆರ್​ಎಫ್​ಒ ಅವರನ್ನು ಅಮಾನತು ಮಾಡಲಾಗಿತ್ತು ನಂತರ ಕೆಲವೇ ತಿಂಗಳಲ್ಲಿ ಬೇರೆಡೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

ಘಟನೆ ನಡೆದ ನಂತರ ಅರಣ್ಯ ಇಲಾಖೆಯ ಎಪಿಸಿಸಿಎಫ್ ಕುಮಾರ ಪುಷ್ಕರ ತಂಡವು ಕಟ್ಟಿಗೆ ಡಿಪೋಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹತ್ತುದಿನಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದ್ದರು. ಆದರೆ, ಘಟನೆ ನಡೆದು ಹದಿನಾಲ್ಕು ತಿಂಗಳು ಕಳೆದರೂ ಯಾವುದೆ ಕಾನೂನು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸಾರ್ವಜನಿಕರದಾಗಿದೆ.

ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೆ ತಪ್ಪಿತಸ್ಥ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.