ಹಾಸನ: ಸದ್ಯ ನಾನು ಜೆಡಿಎಸ್ ಪಕ್ಷದಲ್ಲೇ ಇದ್ದು ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕೆಂಬುದರ ಕುರಿತು ಕ್ಷೇತ್ರದ ಜನರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ನನಗೆ ಕ್ಷೇತ್ರದ ಜನರೇ ಹೈಕಮಾಂಡ್, ಅವರೇ ವರಿಷ್ಠರು ಎಂದು ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಹಾಸನಾಂಬ ದರ್ಶನದ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕಾಂಗ ಪಕ್ಷದ ನಾಯಕನಾಗಿ ನನ್ನನ್ನು ನೇಮಕ ಮಾಡುತ್ತಾರೆ ಎಂದು ಭಾವಿಸಿದ್ದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಫೋನ್ ಮಾಡಿ ಶುಭಾಶಯ ಕೋರಿ ಅಧಿಕಾರ ವಹಿಸಿಕೊಳ್ಳಿ ಎಂದಿದ್ದರು. ಕೋರ್ ಕಮಿಟಿ ಅಧ್ಯಕ್ಷರಾಗಿ ಸುರೇಶ್‌ಬಾಬು ಅಥವಾ ಬಂಡೆಪ್ಪ ಕಾಂಶಪೂರ್ ಅಧ್ಯಕ್ಷರಾಗಲಿ ಎಂದಿದ್ದೆ. ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸುತ್ತಾರೆಂದು ಭಾವಿಸಿದ್ದೆ. ಮಾರನೇ ದಿನ ಬೆಳಗಾಗುವಷ್ಟರಲ್ಲಿ ಸುರೇಶ್‌ಬಾಬು ಅವರನ್ನು ಶಾಸಕಾಂಗ ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದರು. ಅದರಿಂದ ನನಗೆ ಬೇಸರವಿಲ್ಲ. ಆದರೆ ನನ್ನನ್ನು ಕಡೆಗಣಿಸಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಎಂದು ತಿಳಿಸಿದರು.
ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಯಾವುದೇ ಪಕ್ಷದ ಮುಖ್ಯಮಂತ್ರಿಯಾದರೂ ಶ್ಲಾಘಿಸುತ್ತೇನೆ. ಪಕ್ಷದ ವಿಚಾರ ಬಂದಾಗ ಯಾವತ್ತೂ ದ್ರೋಹ ಬಗೆದಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೆ ಇದ್ದಾಗ ಬೇಸತ್ತು ಪಕ್ಷ ತ್ಯಜಿಸಿದ್ದೆ. ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಆಹ್ವಾನಿಸಿದಾಗ ಜೆಡಿಎಸ್ ಸೇರಿ ಮೈಸೂರಿನ ನಾಲ್ಕೈದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಾಯಿತು. ಕಾಂಗ್ರೆಸ್ ಜತೆ ಸಮ್ಮಿಶ್ರ ಸರ್ಕಾರ ಮಾಡಿದಾಗ ಕಾಂಗ್ರೆಸ್‌ನ ಹೈಕಮಾಂಡ್ ಜಿಲ್ಲಾ ಉಸ್ತುವಾರಿ, ಯಾವ ಖಾತೆ ಬೇಕೆಂದು ಕೇಳಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಮನೆಗೆ ಬಂದಿದ್ದರಿಂದ ಪಕ್ಷ ಬಿಡುವ ಪ್ರಶ್ನೆ ಉದ್ಭವಿಸಲಿಲ್ಲ. 2023ರ ಚುನಾವಣೆಯ ಕಾಂಗ್ರೆಸ್ ಹೊಡೆತದಲ್ಲಿ ನಾನು ನನ್ನ ಮಗ ಎಷ್ಟು ಕಷ್ಟಪಟ್ಟು ಗೆದ್ದಿದ್ದೇವೆಂಬುದು ನಮಗೆ ಮಾತ್ರ ಗೊತ್ತು. ಆರ್ಥಿಕ ವ್ಯವಸ್ಥೆ ಇಲ್ಲದೆ ಕಷ್ಟಪಟ್ಟು ಗೆದ್ದಿದ್ದೇವೆ ಎಂದರು.
ಇವತ್ತು ನಮ್ಮ ಪಕ್ಷ ಅಧಿಕಾರದಲ್ಲಿಲ್ಲ. ಆದರೂ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಮುಂದೆ ಕ್ಷೇತ್ರದ ಜನರು ಏನು ಹೇಳುತ್ತಾರೋ ಹಾಗೆಯೇ ಕೇಳುತ್ತೇನೆ. ಜೆಡಿಎಸ್‌ನಲ್ಲೇ ಮುಂದುವರಿಯಿರಿ ಎಂದರೆ ಅದಕ್ಕೂ ಸೈ, ವಯಸ್ಸಾಗಿದೆ ರಾಜಕೀಯ ಬಿಟ್ಟುಬಿಡಿ ಎಂದರೆ ಅದಕ್ಕೂ ನನ್ನ ಸಹಮತವಿದೆ ಎಂದರು.
ಪ್ರಸ್ತುತ ರಾಜಕೀಯ ಪರಿಸ್ಥಿತಿ ತುಂಬ ಬದಲಾಗಿದೆ. ನನಗೆ ಸೂಕ್ತ ಸ್ಥಾನಮಾನ ಕೊಡದ ಮೇಲೆ ಪಕ್ಷ ಸಂಘಟನೆಗಾಗಿ ನಾನ್ಯಾಕೆ ರಾಜ್ಯ ಪ್ರವಾಸ ಮಾಡಬೇಕು. ಬೇರೆಯವರು ರಾಜ್ಯ ಸುತ್ತಾಟ ಮಾಡುತ್ತಾರೆ ಮಂತ್ರಿಯೂ ಆಗುತ್ತಾರೆ. ಪ್ರಸ್ತುತ ಜೆಡಿಎಸ್ ಶಾಸಕನಾಗಿದ್ದು ಭವಿಷ್ಯದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.