ಜಿಲ್ಲೆ

ಹೆಬ್ಬಾಳದ ಹೊಸ ಲೂಪ್ ರಸ್ತೆಯಲ್ಲಿ ವಾಹನ ಸಂಚಾರ ಏಕಿಲ್ಲ?

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಕೈಗೊಂಡಿರುವ ಹಾಲಿ ಮೇಲುಸೇತುವೆ ವಿಸ್ತರಣೆ ಕಾಮಗಾರಿಯ ಭಾಗವಾಗಿ ಹೊಸದಾಗಿ ನಿರ್ಮಿಸಿರುವ ಲೂಪ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದಿರುವುದು ಇನ್ನಷ್ಟ ದಟ್ಟಣೆಗೆ ಆಸ್ಪದ ನೀಡಿದೆ.

ಕೆ.ಆರ್.ಪುರ ಕಡೆಯಿಂದ ನಗರದತ್ತ ಸಾಗುವ ರಾಂಪ್​​ ಅನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಹಿಂದೆ ಇದ್ದ ಲೂಪ್ ಒಡೆದು ಹಾಕಿ ನೇರವಾಗಿ ಸಂಚರಿಸುವಂತೆ ಪ್ರತ್ಯೇಕ ರಾಂಪ್​​ ನಿರ್ಮಿಸಲಾಗುತ್ತಿದೆ. ಇದರ ಜತೆಗೆ ಎಸ್ಟೀಮ್ ಮಾಲ್ ಕಡೆಯಿಂದ ಸರ್ವಿಸ್ ರೋಡ್ ಮೂಲಕ ಹಾದುಬರುವ ವಾಹನಗಳು ಮೇಲುಸೇತುವೆ ಮೇಲೆ ತೆರಳಲು ಅವಕಾಶ ಇಲ್ಲದ ಕಾರಣ ಜಂಕ್ಷನ್ ಮೂಲಕ ಸಾಗಿ ಅರ್ಧ ಚಂದ್ರಾಕೃತಿಯ ಲೂಪ್ ಮೂಲಕ ಫ್ಲೈಓವರ್ ಸೇರಬೇಕಿದೆ. ಇಲ್ಲೀಗ ನೇರವಾಗಿ ಸಂಚರಿಸಲು ಹೊಸದಾಗಿ ರಾಂಪ್​​ ನಿರ್ಮಿಸುವ ಪ್ರಸ್ತಾಪ ಇದೆ. ಹಾಲಿ ತುಮಕೂರು ರಸ್ತೆ ಕಡೆಗೆ ಸಂಚರಿಸುತ್ತಿರುವ ಮಾರ್ಗದಲ್ಲಿ ಹೊಸ ಪಥ ಬರಲಿರುವುದರಿಂದ ಸನಿಹದಲ್ಲಿರುವ ಟ್ರೀ ಪಾರ್ಕ್ ಒಳಗೆ ಹೊಸ ಲೂಪ್ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ವಾರ ಕಳೆದಿದ್ದರೂ, ವಾಹನ ಸಂಚಾರಕ್ಕೆ ಅವಕಾಶ ನೀಡದಿರುವುದು ಮೇಲುಸೇತುವೆ ಬಳಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಿದೆ. ಇದರಿಂದ ಅನಗತ್ಯವಾಗಿ ಸವಾರರು ಪರಡಾಡುವ ಸ್ಥಿತಿ ಇದೆ.

ಲೂಪ್ ಆರಂಭವಾದಲ್ಲಿ ಸಂಚಾರ ಸಲೀಸು:

ಹೊಸ ಲೂಪ್ ಮೂಲಕ ವಾಹನ ಸಂಚರಿಸಲು ಅವಕಾಶ ನೀಡಿದರೆ ಎಸ್ಟೀಮ್ ಮಾಲ್ ಕಡೆಯಿಂದ ಬರುವ ವಾಹನಗಳು ಸುಲಭವಾಗಿ ತೆರಳಬಹುದಾಗಿದೆ. ನಗರದತ್ತ ತೆರಳುವವರು ಲೂಪ್ ಮೂಲಕ ನೇರವಾಗಿ ಹೋಗಬಹುದಾಗಿದೆ. ಲೂಪ್‌ನ ಎಡಬದಿಯಿರುವ ಮಾರ್ಗದ ಮೂಲಕ ಕೆ.ಆರ್.ಪುರದತ್ತ ಹಾಗೂ ಬಲ ಬದಿಯಿರುವ ಮಾರ್ಗವಾಗಿ ತುಮಕೂರು ರಸ್ತೆಯತ್ತ ಅಡೆತಡೆ ಇಲ್ಲದೆ ವಾಹನಗಳು ಸಂಚರಿಸಬಹುದಾಗಿದೆ. ಆದರೆ, ಕಾಮಗಾರಿ ಹೊಣೆ ಹೊತ್ತಿರುವ ಬಿಡಿಎ ಇಂಜಿನಿಯರ್‌ಗಳಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮನಸೋಇಚ್ಛೆ ವರ್ತಿಸುತ್ತಿದ್ದಾರೆ. ಕನಿಷ್ಠಪಕ್ಷ ಪೊಲೀಸರ ಜತೆ ಚರ್ಚಿಸಿ ಸರಾಗ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೊಸ ಲೂಪ್ ಮೂಲಕ ಬೆಳಗ್ಗೆ ಹಾಗೂ ಸಂಜೆ ದಟ್ಟಣೆ ಅವಧಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಲ್ಲಿ ಟ್ರಾಫಿಕ್ ಕಡಿಮೆಯಾಗಲಿದೆ. ರಾತ್ರಿ ವೇಳೆ ನಿರ್ಬಂಧ ಹೇರಿದರೂ ಇತರ ಸಮಯದಲ್ಲಿ ಸಂಚರಿಸಲು ಯಾವುದೇ ಅಡ್ಡಿ ಇಲ್ಲ. ಬೇಗನೆ ಲೂಪ್ ಮಾರ್ಗವನ್ನು ಆರಂಭಿಸಲಿ.

- ಮುನಿಕೃಷ್ಣ, ಬಿಬಿಎಂಪಿ ಮಾಜಿ ಕಾರ್ಪೊರೇಟರ್