ಆರ್.ತುಳಸಿಕುಮಾರ್ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಹೊಸದಾಗಿ ರಚಿಸಿರುವ ಐದು ನಗರ ಪಾಲಿಕೆಗಳಲ್ಲಿ ಆಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿ ಮೇಲ್ಚಿಚಾರಣೆ ಕೈಗೊಳ್ಳಲು ನಗರ ಪ್ರತಿನಿಧಿಸುವ ಸಚಿವರಿಗೆ ಉಸ್ತುವಾರಿ ನೀಡಬೇಕೆಂಬ ಕೂಗು ಕೇಳಿಬಂದಿದೆ.
ರಾಜಧಾನಿಯ ಕಾಪೋರೇಷನ್‌ನಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಆಡಳಿತ ಸಮರ್ಪಕವಾಗಿ ನಡೆಯುತ್ತಿಲ್ಲ. ಅಭಿವೃದ್ಧಿ ಯೋಜನೆಗಳು ಕೂಡ ಪರಿಪೂರ್ಣವಾಗಿ ಅನುಷ್ಠಾನವಾಗುತ್ತಿಲ್ಲ. ಇದರಿಂದ ರಾಜಧಾನಿ ಎಲ್ಲೆಡೆ ಜನರು ಮೂಲಸೌಕರ್ಯ ಇಲ್ಲದೆ ಭಾರಿ ಸಮಸ್ಯೆಗೆ ಒಳಗಾಗಿದ್ದಾರೆ. ಇತ್ತೀಚಿಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಐದು ಹೊಸ ನಗರ ಪಾಲಿಕೆಗಳು ಶೈಶಾವಸ್ಥೆಯಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಟೇಕ್ ಆಫ್ ಆಗಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಹಾನಗರ ಪ್ರತಿನಿಧಿಸುವ ಸಚಿವರಿಗೆ ಡೆವಲೆಪ್ಮೆಂಟ್ ವರ್ಕ್ಸ್ ಉಸ್ತುವಾರಿಅನ್ನು ತಾತ್ಕಾಲಿಕವಾಗಿ ನಿಡಬಹುದಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ 5 ಪಾಲಿಕೆಗಳ ಚುನಾವಣೆಗಾಗಿ ಪಕ್ಷದ ಮಟ್ಟದಲ್ಲಿ ಸಿದ್ಧತೆ ಆರಂಭಿಸಲು ಆಡಳಿತಾರೂಢ ಕಾಂಗ್ರೆಸ್ ಪ್ರತಿ ಕಾರ್ಪೊರೇಷನ್‌ಗೆ ಸಚಿವರನ್ನು ಉಸ್ತುವಾರಿಯಾಗಿ ನಿಯೋಜಿಸಿದೆ. ಇದು ಪಕ್ಷದ ನಿರ್ಧಾರ ಆಗಿದ್ದರೂ, ಬೆಂಗಳೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಇದೇ ಮಾಧರಿಯಲ್ಲಿ ಸಚಿವರನ್ನು ನೇಮಿಸಬಹುದಾಗಿದೆ. ಇದರಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಯೋಜನೆಗಳು ಮರಳಿ ಹಳಿಗೆ ಬರಲಿದೆ. ಮುಖ್ಯವಾಗಿ ವರ್ಷಗಳಿಂದ ತೆವಳುತ್ತಾ ಸಾಗಿರುವ ಹಲವು ಕಾಮಗಾರಿಗಳನ್ನು ಮಂತ್ರಿಗಳ ಉಸ್ತುವಾರಿಯಲ್ಲಿ ಪೂರ್ಣಗೊಳಿಸಿ ನಗರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಲಿದೆ ಎಂಬ ಸಲಹೆ ವ್ಯಕ್ತವಾಗಿದೆ.
ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಹಿಸಿದ್ದಾರೆ. ಜಿಬಿಎ ರಚನೆ ಪ್ರಕ್ರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಹೊಸ ಪಾಲಿಕೆಗಳ ಕಾರ್ಯನಿರ್ವಹಣೆಗೆ ಇನ್ನೂ ಅಧಿಕ ಸಮಯ ಮೀಸಲಿಡಬೇಕಿದೆ. ಆದರೆ, ಜಲಸಂಪನ್ಮೂಲ ಖಾತೆಯನ್ನೂ ನಿಭಾಯಿಸುತ್ತಿರುವ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನೂ ವಹಿಸಿದ್ದಾರೆ. ಸಮಯದ ಅಭಾವದಿಂದಾಗಿ ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯದ ಮೇಲೆ ನಿಗಾ ವಹಿಸಲಾಗುತ್ತಿಲ್ಲ. ಜಿಬಿಎ ಅಸ್ತಿತ್ವಕ್ಕೆ ಬಂದು ಒಂದು ವಾರ ಕಳೆದರೂ, ಈವರೆಗೂ ಆಯಾ ಕಾಪೋರೇಷನ್‌ಗೆ ಸೀಮಿತಗೊಳಿಸಿ ಪ್ರತ್ಯೇಕ ಸಭೆಗಳನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಚುನಾವಣೆ ನಡೆಯುವವರಿಗೆ ಪ್ರತಿ ಪಾಲಿಕೆಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಮಾತ್ರ ಮಂತ್ರಿಗಳನ್ನು ಉಸ್ತುವಾರಿ ವಹಿಸಿದರೆ ಸಾರ್ವಜನಿಕರನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಸಚಿವರ ಉಸ್ತುವಾರಿಯಿಂದ ಲಾಭ:
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಂಕ್ರಾಮಿಕ ಕೋವಿಡ್ ಉಲ್ಬಣವಾದಾಗ ಬೆಂಗಳೂರಿನಲ್ಲಿ ಲಸಿಕೆ ವಿತರಣೆ ಸಹಿತ ಇನ್ನಿತರ ಸೌಲಭ್ಯ ಕಲ್ಪಿಸಲು ಸಚಿವರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿತ್ತು. ಬಿಬಿಎಂಪಿಯ ಎಂಟೂ ವಲಯಗಳಿಗೂ ಒಬೊಬ್ಬ ಮಂತ್ರಿಯನ್ನು ನೇಮಿಸಿ ಮೇಲ್ಚಿಚಾರಣೆ ಕೈಗೊಂಡಿದ್ದರಿಂದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕೋವಿಡ್ ನಿಯಂತ್ರಿಸಲು ಸಲತೆ ಕಾಣಲಾಗಿತ್ತು. ಈಗಲೂ ಸಮರೋಪಾದಿಯಲ್ಲಿ ರಾಜಧಾನಿಗೆ ಮೂಲಸೌಕರ್ಯ ಕಲ್ಪಿಸಲು ಸಚಿವರ ಉಸ್ತುವಾರಿಯಿಂದ ಪಾಲಿಕೆಗಳ ಆಡಳಿತ ಸರಿಹಾದಿಗೆ ಬರುವ ಸಾಧ್ಯತೆ ಇದೆ.
ನಗರ ಪ್ರತಿನಿಧಿಸುವ ಸಚಿವರು:
ರಾಮಲಿಂಗಾರೆಡ್ಡಿ
ಕೆ.ಜೆ. ಜಾರ್ಜ್
ದಿನೇಶ್ ಗುಂಡೂರಾವ್
ಕೃಷ್ಣಬೈರೇಗೌಡ
ಜಮೀರ್ ಅಹ್ಮದ್ ಖಾನ್
ಬಿ.ಎಸ್. ಸುರೇಶ್
ಅನುದಾನ ಸದ್ಬಳಕೆಗೆ ಅನುಕೂಲ:
ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿಗಾಗಿ 1,000 ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಹಣದಲ್ಲಿ ಕಾಂಗ್ರೆಸ್ ಶಾಸಕರಿಗೆ ತಲಾ 50 ರೂ. ಒದಗಿಸುವ ವಾಗ್ದಾನ ನೀಡಲಾಗಿದೆ. ಪ್ರತಿಪಕ್ಷ ಶಾಸಕರಿಗೂ ತಲಾ 25 ಕೋಟಿ ರೂ. ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯ ನಗರದಲ್ಲಿ ಕಾಂಗ್ರೆಸ್‌ನ 12 ಹಾಗೂ ಬಿಜೆಪಿಯ 16 ಶಾಸಕರು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಪಕ್ಷ ಶಾಸಕರು ಇರುವುದರಿಂದ ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಮಗಾರಿಗಳ ಉಸ್ತುವಾರಿಯನ್ನು ಸಚಿವರಿಗೆ ವಹಿಸಬಹುದಾಗಿದೆ. ಇದರಿಂದ ಸರ್ಕಾರ ಬಿಡುಗಡೆಗೊಳಿಸುವ ಪೂರ್ಣ ಹಣ ಸದ್ವಿನಿಯೋಗ ಆಗಲಿದೆ ಎಂದು ಪ್ರತಿಪಾದಿಸಲಾಗಿದೆ.
ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿ ಅವಧಿಯ ವೇಳೆ ನಗರ ಅಭಿವೃದ್ಧಿ ಸಮರ್ಪಕವಾಗಿ ನಡೆದಿಲ್ಲ. ಹೊಸ ಪಾಲಿಕೆಗಳು ಅಸ್ತಿತ್ವಕ್ಕೆ ಬಂದ ನಂತರ ಜನರು ಅಭಿವೃದ್ಧಿಗಾಗಿ ಕಾತರರಾಗಿದ್ದಾರೆ. ಮೂಲಸೌಕರ್ಯ ಯೋಜನೆಗಳ ಉಸ್ತುವಾರಿಗಾಗಿ ಸಚಿವರನ್ನು ನಿಯೋಜಿಸಬಹುದು. ಜತೆಗೆ ಅನುದಾನ ಸದ್ಬಳಕೆಗಾಗಿ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಜನಪರ ಕೆಲಸ ಮಾಡಬಹುದಾಗಿದೆ. ಪಾಲಿಕೆಗಳು ಮಾಜಿ ಮೇಯರ್‌ಗಳ ಸಲಹಾ ಸಮಿತಿ ನೇಮಿಸಿಕೊಳ್ಳಬಹುದು.
- ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್
ಬೆಂಗಳೂರಿನಲ್ಲಿ ರಸ್ತೆ ಸೇರಿ ಪ್ರಮುಖ ಮೂಲಸೌಕರ್ಯ ಜಾರಿಗೆ ಆದ್ಯತೆ ನೀಡಬೇಕಿದೆ. ಐದು ಪಾಲಿಕೆಗಳಿಗೆ ಸರ್ಕಾರ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿ ನೇಮಿಸಿ ಅಭಿವೃದ್ಧಿ ಕಾರ್ಯಕ್ಕೆ ಚುರುಕುಗೊಳಿಸಬೇಕು. ಆದರೆ, ಈ ವ್ಯವಸ್ಥೆ ತಾತ್ಕಾಲಿಕವಾಗಿರಬೇಕು. ಅಧಿಕಾರಿಗಳಿಂದ ಎಲ್ಲವನ್ನೂ ನಿರೀಕ್ಷಿಸುವಂತಿಲ್ಲ. ಆದಷ್ಟುಬೇಗ ಪಾಲಿಕೆ ಎಲೆಕ್ಷನ್ ನಡೆಸಲು ಸರ್ಕಾರ ಗಮನ ಹರಿಸಿದರೆ ಜನರ ಸಹಕಾರ ಸಿಗಬಹುದು. ಚುನಾಯಿತ ಆಡಳಿತ ಬಂದಲ್ಲಿ ನಗರ ಅಭಿವೃದ್ಧಿಗೆ ವೇಗ ಸಿಗಲಿದೆ.
- ಕಾತ್ಯಾಯಿಸಿ ಚಾಮರಾಜ್, ಸಾಮಾಜಿಕ ಕಾರ್ಯಕರ್ತೆ