ಜಿಲ್ಲೆ

ತಹಸೀಲ್ದಾರ್​ ವಿರುದ್ಧ ಯಾವುದೇ ಕ್ರಮವಿಲ್ಲ ಏಕೆ?

ಕೋಲಾರ ಡೆಸ್ಕ್

ಕೆಜಿಎಫ್​- ಕೆಜಿಎಫ್​ ತಾಲೂಕಿನಾದ್ಯಂತ 529 ಎಕರೆ ಅಕ್ರಮ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಅಂದಿನ ತಹಸೀಲ್ದಾರ್​, ಶಿರಸ್ತೇದಾರ್​ ಮತ್ತು ಸಿಬ್ಬಂದಿ ಮೇಲೆ ದೂರು ದಾಖಲಿಸಿ, ಕೆಳ ಹಂತದ ಸಿಬ್ಬಂದಿ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದು, ತಹಸೀಲ್ದಾರ್​ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರಲು ಕಾರಣವೇನು ಎಂದು ಮಾಜಿ ಶಾಸಕ ಎಸ್​.ರಾಜೇಂದ್ರನ್​ ಪ್ರಶ್ನಿಸಿದರು.

ನಗರಸಭಾ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಂಡಿದ್ದ ಕೆಜಿಎಫ್​ ತಾಲೂಕು ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು-&ಚೆನ್ನೆ$ ಎಕ್ಸ್​ಪ್ರೆಸ್​ ಕಾರಿಡಾರ್​ ಅಕ್ಕಪಕ್ಕದಲ್ಲಿ ಮತ್ತು ತಾಲೂಕಿನ ಇತರೆಡೆಗಳಲ್ಲಿ 219 ಮಂದಿಗೆ 529 ಎಕರೆ ಜಮೀನು ಅಕ್ರಮ ಮಂಜೂರಾತಿಗೆ ಸಂಬಂಧಿಸಿದಂತೆ ಅಂದಿನ ತಹಸೀಲ್ದಾರ್​ ಮತ್ತು ಸಿಬ್ಬಂದಿ ಮೇಲೆ ಲೋಕಾಯುಕ್ತ ಎಫ್​ಐಆರ್​ ದಾಖಲಿಸಲಾಗಿದೆ. ಆದರೆ ಭ್ರಷ್ಟರನ್ನು ಕಾನೂನು ಶಿಕ್ಷೆಗೊಳಪಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಅಶೋಕ ನಗರದ ರಾಜಕಾಲುವೆಯನ್ನು ಖಾಸಗಿಯವರೊಬ್ಬರು ಮುಚ್ಚಿ, ಕಾಲುವೆ ಮೇಲೆ ಕಟ್ಟಡ ನಿಮಾರ್ಣ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸುವಂತೆ ಒಬ್ಬ ಪೌರಾಯುಕ್ತರು ಇಂಜಿನಿಯರ್​ ಜತೆಗೆ ಆ ಖಾಸಗಿ ವ್ಯಕ್ತಿಯ ಮನೆ ಮುಂದೆ ಧರಣಿ ಮಾಡುತ್ತಾರೆ ಎಂದರೆ ಹೇಗೆ? ಅಧಿಕಾರ ಚಾಲಾಯಿಸಬೇಕಾದ ಅಧಿಕಾರಿಯೇ ಬೇಡಿಕೊಳ್ಳುವ ಪರಿಸ್ಥಿತಿಗೆ ತಲುಪಿರುವುದು ಖೇದಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ನಗರೋತ್ಥಾನ ಯೋಜನೆಯಡಿ ರಸ್ತೆಗಳನ್ನು ನಿಮಾರ್ಣ ಮಾಡಿದ್ದು, ಆರು ತಿಂಗಳು ಕಳೆಯುವ ಮುನ್ನವೇ ಕಿತ್ತುಬಂದಿವೆ. ಕಿಂಗ್​ ಜಾರ್ಜ್​ ಹಾಲ್​ ಬಳಿ 8 ವರ್ಷದ ಹಿಂದೆ ಹಾಕಿರುವ ಟೈಲ್ಸ್​ ಹಾಗೆಯೇ ಇವೆ, ಆದರೆ ಈ ರಸ್ತೆಗಳು 6 ತಿಂಗಳ ಅವಧಿಗೆ ಕಿತ್ತು ಬಂದಿದ್ದು, ಅದನ್ನು ಪರೀಕ್ಷೆಗೆ ಕಳುಹಿಸಿಕೊಡಬೇಕು ಎಂದು ದೂರು ಸಲ್ಲಿಸಿದರು.

ದ್ಯಾವರಪ್ಪ ಎಂಬುವವರು ಅರ್ಜಿ ಸಲ್ಲಿಸಿ ಮಸ್ಕಂ ಗ್ರಾಮದ ಸರ್ವೇ ನಂಬರ್​ 64 ರ 11.7 ಎಕರೆ ಸರ್ಕಾರಿ ಗೌಡನಕೆರೆ ಪೈಕಿ 6 ಎಕರೆ ಮತ್ತು ಸ.ನಂ.67 ರ 12-.28 ಎಕರೆ ಪೈಕಿ 4 ಎಕರೆ ಜಮೀನನ್ನು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಜೂರು ಮಾಡಿದ್ದಾರೆ. ಈ ಜಮೀನನ್ನು ಸರ್ವೇ ಮಾಡಲಾಗಿದೆ ಎಂದು ಉಲ್ಲಖಿಸಲಾಗಿದೆ. ಮಂಜೂರು ಆಗಿರುವ ಭೂಮಿ ಎಲ್ಲಿ ಬರುತ್ತದೆ ಎಂದು ಗುರುತು ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಈ ಜಮೀನನ್ನು ಗುರುತು ಮಾಡದೇ ಇರಲು ಅಧಿಕಾರಿಗಳ ಮೇಲೆ ಒತ್ತಡವೇ ಕಾರಣವಾಗಿರುವ ಹಿನ್ನೆಲೆಯಲ್ಲಿ ತಪು$್ಪ ಮಾಡಿರುವ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕು ಎಂದು ಮನವಿ ಮಾಡಿದರು.

ಲೋಕಾಯುಕ್ತ ಅಧೀಕ್ಷಕ ಧನಂಜಯ ಮಾತನಾಡಿ, ಕಂದಾಯ ಇಲಾಖೆ 4 ಅರ್ಜಿ, ನಗರಸಭೆಗೆ ಸಂಬಂಧಿಸಿದಂತೆ 3 ಮತ್ತು ನಗರಸಭೆ, ಬೆಸ್ಕಾಂ, ಪಂಚಾಯಿತಿಗೆ ಸಂಬಂಧಿಸಿದಂತೆ 1 ಅರ್ಜಿ ಸೇರಿ ಒಟ್ಟು 8 ಅರ್ಜಿ ಬಂದಿದ್ದು, ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಒಂದು ತಿಂಗಳ ಅವಧಿಯೊಳಗೆ ಅರ್ಜಿಗಳ ವಿಲೇವಾರಿ ಮಾಡಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಕಳೆದ ಬಾರಿ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಒಟ್ಟು 12 ಅರ್ಜಿ ಬಂದಿದ್ದು, 10 ಅರ್ಜಿ ವಿಲೇವಾರಿಯಾಗಿದ್ದು, 2 ಅರ್ಜಿ ಬಾಕಿ ಇವೆ. ಈ ಎರಡೂ ಅರ್ಜಿಗಳನ್ನು ವಿಲೇ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಸಂಪೂರ್ಣ ಮಾಹಿತಿ ಇನ್ನೂ ನಮ್ಮ ಇಲಾಖೆಗೆ ಬಂದಿಲ್ಲ ಎಂದರು.

ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್​ಪಿ ಸುಧೀರ್​, ಇನ್​ಸ್ಪೆಕ್ಟರ್​ ಯಶವಂತಕುಮಾರ್​, ಸಿಬ್ಬಂದಿ ವಾಸುದೇವ್​, ದೇವಪ್ಪ, ತಹಸೀಲ್ದಾರ್​ ನಾಗವೇಣಿ, ಇಒ ವೆಂಕಟೇಶಪ್ಪ, ನಗರಸಭೆ ಪೌರಾಯುಕ್ತ ಪವನ್​ಕುಮಾರ್​, ಸಿಡಿಪಿಒ ರಾಜೇಶ್​ ಇದ್ದರು.