ಜಿಲ್ಲೆ

ಕಾರಾಗೃಹಕ್ಕೆ ಮೊಬೈಲ್ ಜಾಮರ್ ಯಾಕೆ? ಪ್ರತಿಭಟನೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಪ್ರಶ್ನೆ

ಮಂಗಳೂರು: ಸಮರ್ಪಕವಾಗಿ ತಪಾಸಣೆ ಮಾಡಿದರೆ ಕಾರಾಗೃಹಕ್ಕೆ ಮೊಬೈಲ್ ಜಾಮರ್ ಅಳವಡಿಸುವ ಅವಶ್ಯಕತೆ ಏನಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು.

ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಕೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ವಿರುದ್ಧ ಶನಿವಾರ ಕಾರಾಗೃಹದ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ, ಅವರು ಮಾತನಾಡಿದರು.

ಕಾರಾಗೃಹದ ಒಳಗಡೆಯಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಜಾಮರ್ ಸಮಸ್ಯೆ ಇಲ್ಲ. ಹೊರಗಿರುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜೈಲ್‌ನಲ್ಲಿ ಏಕಾಏಕಿ 5ಜಿ ಜಾಮರ್ ಅಳವಡಿಕೆಯಿಂದ ಸುತ್ತಮುತ್ತಲಿನ 6 ವಾರ್ಡ್‌ನಲ್ಲಿರುವ ವ್ಯಾಪಾರ ಕೇಂದ್ರ, ಕಚೇರಿಗಳು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜೈಲು ವಿಭಾಗದ ಡಿಜಿ, ಗೃಹ ಸಚಿವರು, ಜೈಲು ಸೂಪರಿಂಡೆಂಟ್ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಜೈಲು ಅಧಿಕಾರಿಗಳು ಸರಿಯಿದ್ದರೆ ಜೈಲ್‌ನಲ್ಲಿ ಜಾಮರ್ ಅಗತ್ಯವೇಕೆ? ಜಾಮರ್‌ನಿಂದ ಉಂಟಾದ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದವರು ಆಗ್ರಹಿಸಿದರು.

ಕಾರಾಗೃಹಕ್ಕೆ ಮುತ್ತಿಗೆ ಯತ್ನ: ಕಾರಾಗೃಹದಲ್ಲಿ ಅಳವಡಿಸಿರುವ ಜಾಮರ್ ಕಿತ್ತೊಗೆಯಲು ಕಾರಾಗೃಹಕ್ಕೆ ಮುತ್ತಿಗೆ ಯತ್ನ ನಡೆಸಿದರು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಮೊಬೈಲ್ ನೆಲಕ್ಕೆ ಬಡಿದು ಆಕ್ರೋಶ: ಜಾಮರ್ ಸಮಸ್ಯೆಯನ್ನು ವಿರೋಧಿಸಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಮೇಯರ್‌ಗಳಾದ ಸುಧೀರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಮತ್ತಿತರರು ಮೊಬೈಲ್‌ಗಳನ್ನು ನೆಲಕ್ಕೆ ಬಡಿದು ಜಾಮರ್ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಉಪಮೇಯರ್ ಪೂರ್ಣಿಮಾ, ಮುಖಂಡರಾದ ರಾಧಾಕೃಷ್ಣ, ವಿಜಯ ಕುಮಾರ್, ರಮೇಶ್ ಹೆಗ್ಡೆ, ಅಕ್ಷಿತ್ ಕೊಟ್ಟಾರಿ, ಶಕೀಲ ಕಾವ, ರೇವತಿ, ಭಾನುಮತಿ ಮತ್ತಿತರರು ಉಪಸ್ಥಿತರಿದ್ದರು.

ತಳ್ಳಾಟ ಲೀಲಾವತಿ ಅಸ್ವಸ್ಥ

ಕಾರಾಗೃಹಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವ ವೇಳೆ ತಳ್ಳಾಟ ಉಂಟಾಯಿತು. ಈ ಸಂದರ್ಭ ಮನಪಾ ನಿಕಟಪೂರ್ವ ಸದಸ್ಯೆ ಲೀಲಾವತಿ ಅವರು ನೆಲಕ್ಕೆ ಬಿದ್ದ ಪರಿಣಾಮ ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.