ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 11 ವರ್ಷಗಳಿಂದ ಬರೀ ಚುನಾವಣಾ ಪ್ರಚಾರದಲ್ಲೇ ಕಾಲ ಕಳೆದಿದ್ದಾರೆ. ಬಿಹಾರ್‌ಗೆ ಪದೇ ಪದೇ ಭೇಟಿ ನೀಡುವ ಅವರು ಮಣಿಪುರಕ್ಕೆ ಒಮ್ಮೆಯೂ ಹೋಗಿಲ್ಲ ಏಕೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಸೇರಿ ದೇಶದ ಹಲವರು ರಾಜ್ಯಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿರುವುದು ಒಳಗೊಂಡಂತೆ ಚುನಾವಣಾ ಅಕ್ರಮದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಂತರ ಲೋಕಸಭೆ ಚುನಾವಣೆ ವೇಳೆಗೆ 41 ಲಕ್ಷ ಮತದಾರರು ಹೆಚ್ಚಾಗುತ್ತಾರೆ. ಆದರೆ, ಬಿಹಾರ ಚುನಾವಣೆ ಸಮೀಪಿಸುತ್ತಿರುವಾಗ 65 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗುತ್ತಾರೆ. ಬಿಹಾರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿದ್ದ ಮತದಾರರಿಗೆ ಇದೀಗ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಲು ಅವಕಾಶವೇ ಇಲ್ಲದಂತಾಗಿದೆ. ಮಹಾರಾಷ್ಟ್ರದಲ್ಲಿ ಆರು ತಿಂಗಳ ಅವಧಿಯಲ್ಲಿ 41 ಲಕ್ಷ ಮತದಾರರ ಸಂಖ್ಯೆ ಹೆಚ್ಚಾಗಿದ್ದು ಹೇಗೆಂದು ಅನುಮಾನ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಓಟಿಗಾಗಿ ಹಿಂದು, ಮುಸ್ಲಿಂ ಬೇಕಷ್ಟೆ. ರಾಮ ಮಂದಿರವನ್ನೂ ಅವರು ಜನರ ದುಡ್ಡಿನಲ್ಲಿ ನಿರ್ಮಿಸಿದ್ದಾರೆ. ಬಿಜೆಪಿಯ ಕಚೇರಿಗಳನ್ನೂ ಅವರು ಜನರ ದುಡ್ಡಿನಲ್ಲೇ ಕಟ್ಟಿಕೊಂಡಿದ್ದಾರೆ. ಬಿಜೆಪಿಯವರ ಮನೆಯಲ್ಲಿ ಬಂಗಾರದ ತಟ್ಟೆ ಇದೆಯೋ ಹೊರತು ಹಿಂದುಗಳ ಮನೆಯಲ್ಲಿಲ್ಲ. ಇವರಿಗೆ ಚುನಾವಣೆ ಬಂದಾಗ ಹಿಂದುಗಳ ಮತ ಬೇಕಷ್ಟೆ ಎಂದು ಕಿಡಿಕಾರಿದರು.