ಜಿಲ್ಲೆ

ಅಧಿಕಾರವಿದ್ದಾಗ ಸಮ್ಮತಿಸಿ ಈಗ ವಿರೋಧವೇಕೆ?

* ಎಚ್​ಡಿಡಿ, ಎಚ್​ಡಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರಶ್ನೆ

* ಜಿಬಿಡಿಎಗೆ ಅಧಿಸೂಚನೆ ಹೊರಡಿಸಿದ್ದೇ ಕುಮಾರಸ್ವಾಮಿ

ರಾಮನಗರ

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಐಎಡಿಬಿಗೆ 900 ಎಕರೆ ಜಾಗ ಕೊಟ್ಟಾಗ ಸುಮ್ಮನಿದ್ದ ದೇವೇಗೌಡರು, ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಎ.ಮಂಜುನಾಥ್​, ಈಗ ಗ್ರೇಟರ್​ ಬೆಂಗಳೂರು ಸಮಗ್ರ ನಗರ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಪ್ರಶ್ನಿಸಿದರು.

ರಾಮನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹೋರಾಟ ಮಾಡುವುದಾದರೆ ಬಹಳ ಸಂತೋಷ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದೇ ಅವರ ಸುಪುತ್ರ. ಬಿಡದಿ ಟೌನ್​ ಶಿಪ್​ಗೆ ಡಿಎಲ್​ಎಫ್​ ಜತೆ ಒಪ್ಪಂದ ಮಾಡಿಕೊಂಡಿ, ಹಣ ಕಟ್ಟಿಸಿಕೊಂಡಿದ್ದೂ ಅವರೇ, ಅವರ ಆಡಳಿತ ಅವಧಿಯಲ್ಲಿ ಈ ಭೂಮಿಯನ್ನು ಏಕೆ ಡಿನೋಟಿಫಿಕೇಷನ್​ ಮಾಡಲಿಲ್ಲ? ಯಡಿಯೂರಪ್ಪ ಅವರು ಕೆಐಎಡಿಬಿಗೆ ಭೂಮಿ ಕೊಟ್ಟಾಗ ಆ ಭಾಗದ ಎಲ್ಲ ರೈತರು ಪರಿಹಾರ ಪಡೆದಿದ್ದಾರೆ. ಈಗ ಆ ಜಾಗ ಕೆಐಎಡಿಬಿ ಸ್ವತ್ತಾಗಿದೆ. ಇವರೆಲ್ಲ ಅಂದು ಪ್ರಶ್ನೆ ಮಾಡದೇ ಸಹಕಾರ ಕೊಟ್ಟಿದ್ದೇಕೆ? ಎಂದು ಡಿಕೆಶಿ ಹರಿಹಾಯ್ದರು.

ಡಿನೋಟಿಫಿಕೇಷನ್​ ಮಾಡುವುದು ಬೇಡ, ಆ ಭೂಮಿಯನ್ನು ಯಥಾಸ್ಥಿತಿಯಲ್ಲಿ ಬಿಡಿ ಎಂಬ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿ, ಅವರ ಮಾತು ಕೇಳಲು ನಾನು ತಯಾರಿಲ್ಲ. ನಮ್ಮ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದೆ. ಯಡಿಯೂರಪ್ಪ ಅವರ ಕಾಲದಲ್ಲೂ ಇಲ್ಲಿನ ಭೂಮಿಗೆ 90 ಲಕ್ಷದಿಂದ 1 ಕೋಟಿ ರೂ. ಪರಿಹಾರ ನಿಗದಿ ಮಾಡಿದಾಗ, ಆ ಜಾಗವನ್ನು ಯಥಾಸ್ಥಿತಿಯಲ್ಲೇ ಬಿಡಿಸಬಹುದಿತ್ತಲ್ಲವೇ? ಏಕೆ ಬಿಡಿಸಲಿಲ್ಲ? ಆಗ ಮಂಜುನಾಥ್​ ಅವರೇ ಶಾಸಕರಾಗಿದ್ದರಲ್ಲವೇ? ಹಾಗಾಗಿ ಈ ಯೋಜನೆಗೆ ರೈತರ ವಿರೋಧವಿಲ್ಲ, ರೈತರ ಸಂಪೂರ್ಣ ಸಹಕಾರವಿದೆ ಎಂದು ಡಿಸಿಎಂ ತಿಳಿಸಿದರು.

ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ

ಕಾನೂನು ಚೌಕಟ್ಟಿನಲ್ಲಿ ನಾವು ಮುಂದುವರಿಯುತ್ತೇವೆ. ನಾನು ರೈತರಿಗೆ ದೊಡ್ಡ ಆಫರ್​ ಕೊಟ್ಟಿದ್ದೇನೆ. ಯಾರು ಈ ಪರಿಹಾರ ಬೇಡ ಎನ್ನುತ್ತಾರೋ ಅವರಿಗೆ ಕಾನೂನು ಪ್ರಕಾರ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗೆ ಇರುವ ಮಾರ್ಗಸೂಚಿ ಮೌಲ್ಯ ಆಧಾರದ ಮೇಲೆ ನ್ಯಾಯಾಲಯಕ್ಕೆ ನಾವು ಹಣ ಠೇವಣಿ ಮಾಡುತ್ತೇವೆ ಎಂದ ಡಿಕೆಶಿ ತಿಳಿಸಿದರು.

ಜಪಾನ್​ ಮಾದರಿಯಲ್ಲೇ ಟೌನ್​ಶಿಪ್​ ನಿರ್ಮಿಸುವಂತೆ ಹೇಳಿದ್ದೇನೆ..!

ಕೆಐಡಿಬಿಗೆ 900 ಎಕರೆ ಭೂಮಿ ಕೊಟ್ಟಾಗ ಯಾರು ಹಣ ಪಡೆದಿದ್ದಾರೆ ಎನ್ನುವ ಪಟ್ಟಿ ಬಿಡುಗಡೆ ಮಾಡಲೇ? ಟೊಯೋಟಾ ಕಂಪನಿಯವರು ನನ್ನನ್ನು ಭೇಟಿ ಮಾಡಿ ವಾಸದ ಉದ್ದೇಶಕ್ಕೆ 300 ಎಕರೆ ಭೂಮಿ ಬೇಕು ಎಂದು ಕೇಳಿದರು. ಅದಕ್ಕೆ ನಾನು ಹೇಳಿದೆ, 300 ಎಕರೆ ತೆಗೆದುಕೊಳ್ಳುವುದು ಮುಖ್ಯವಲ್ಲ. ಜಪಾನ್​ ಟೌನ್​ ಶಿಪ್​ ಮಾದರಿಯಲ್ಲೇ ನಿಮ್ಮ ಟೌನ್​ಶಿಪ್​ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು. ಟೊಯೋಟಾದವರು ಎಲ್ಲಿ ಭೂಮಿ ಕೇಳಿದ್ದಾರೆ? ಜಿಬಿಐಟಿಯಲ್ಲೇ ಕೊಡುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ, ಅವರು ಜಿಬಿಐಟಿಯಲ್ಲೇ ಕೇಳುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದರು.

ರಾಜಕೀಯ ವಿರೋಧಿಗಳ ಹೋರಾಟ

ಯೋಜನೆ ವಿರೋಧಿ ಹೋರಾಟಕ್ಕೆ ದೇವೇಗೌಡರ ಆಗಮನದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಅಶೋಕ್​ ಆದರೂ ಬರಲಿ, ದೇವೇಗೌಡರಾದರೂ ಬರಲಿ. ಅವರ ರಾಜಕೀಯ ಹೋರಾಟಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಅವರಿಗೂ ವಾಸ್ತವಾಂಶ ಗೊತ್ತಿದೆ. ಅಶೋಕ್​ ಅವರಿಗೆ ಪೆನ್​ ಹಿಡಿಯುವ ಅಧಿಕಾರ ಇದ್ದಾಗ ಈ ಭೂಮಿಯನ್ನು ಏಕೆ ಬಿಡಿಸಲಿಲ್ಲ? ಯಡಿಯೂರಪ್ಪ ಅವರು ಏಕೆ ಬಿಡಿಸಲಿಲ್ಲ? ದೇವೇಗೌಡರು ಮಗನ ಮೂಲಕ ಏಕೆ ಬಿಡಿಸಲಿಲ್ಲ? ಆಗ ಇದು ಅವರದೇ ಕ್ಷೇತ್ರವಾಗಿತ್ತು. ಆಗ ನಾನು ಮಂತ್ರಿಯಾಗಿರಲಿಲ್ಲ, ಅವರ ಮಗನಿಗೆ ಇದು ಸರಿ ಇಲ್ಲ ಬೇಡ ಎಂದು ಹೇಳಬಹುದಿತ್ತಲ್ಲವೇ? ಅವತ್ತು ಸರಿ ಮಾಡದೇ ಇವತ್ತು ರಾಜಕಾರಣ ಮಾಡಲು ನಮ್ಮ ಕಡೆ ಬೊಟ್ಟು ಮಾಡುತ್ತಿದ್ದಾರೆ. ಶಾಸಕ ಬಾಲಕೃಷ್ಣ ಅವರ ರಾಜಕೀಯ ವಿರೋಧಿಗಳು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು