ಜಿಲ್ಲೆ

ಬೇಡಿಕೆಯಷ್ಟು ಬೀದಿದೀಪ ಅಳವಡಿಸಿಲ್ಲ ಯಾಕೆ ?

ಉತ್ತರ ಕನ್ನಡ ಡೆಸ್ಕ್

ಕುಮಟಾ: ಪಟ್ಟಣದ ಬೀದಿ ದೀಪಗಳ ನಿರ್ವಹಣೆ ವಿಚಾರ ಸದಸ್ಯರ ತೀವ್ರ ಆಕ್ಷೇಪಕ್ಕೆ ಗುರಿಯಾದ ಪ್ರಸಂಗ ಪಟ್ಟಣದ ರಾರಾ ಅಣ್ಣಾ ಪೈ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸದಸ್ಯ ಎಂ.ಟಿ. ನಾಯ್ಕ ಮಾತನಾಡಿ, ಹೊಸ ವ್ಯವಸ್ಥೆಯಲ್ಲಿ ಕಳೆದ ವರ್ಷ ಕೈಗೊಂಡಿದ್ದ ಬೀದಿದೀಪ ಅಳವಡಿಕೆಯಲ್ಲಿ ಬಹುತೇಕ ಎಲ್ಲ ವಾರ್ಡ್​ಗಳಲ್ಲಿ ಹೊಸ ವಿದ್ಯುತ್ ದೀಪ ಅಳವಡಿಕೆ ಮಾಡಿಲ್ಲ. ವಿದ್ಯುತ್ ಬೀದಿ ದೀಪಗಳು ಹಗಲಿನಲ್ಲೂ ಉರಿಯುತ್ತಿದ್ದರೂ ನೋಡುವವರಿಲ್ಲ. ದೀಪ ಕೆಟ್ಟರೆ ಹೇಳುವವರು ಕೇಳುವವರು ಇಲ್ಲ. ಬೀದಿದೀಪ ನಿರ್ವಹಣೆಗೆ ಪುರಸಭೆಗೆ ಏನು ಅಧಿಕಾರ ಉಳಿದಿದೆ ಎಂದು ಪ್ರಶ್ನಿಸಿದರು.

ನಾಮನಿರ್ದೇಶಿತ ಸದಸ್ಯ ಕಾಂತರಾಜ ನಾಯ್ಕ ಮಾತನಾಡಿ, ಮೊದಲು ಬೀದಿ ದೀಪಗಳು ಅಳವಡಿಸಿದ ಕಂಬಗಳಿಗೆ ನಂಬರ್ ಸಹಿತ ಪುರಸಭೆಯಲ್ಲಿ ದಾಖಲೆ ಇರುತ್ತಿತ್ತು. ಮೊದಲಿದ್ದ ಸಂಖ್ಯೆಗೆ ತಕ್ಕಂತೆ ಪುರಸಭೆಯ ಬೇಡಿಕೆಯಷ್ಟು ಕಂಬಗಳಿಗೆ ಬೀದಿದೀಪ ಯಾಕೆ ಅಳವಡಿಸಿಲ್ಲ. ಬಾಕಿ ಬೀದಿದೀಪ ಅಳವಡಿಕೆ ಯಾವಾಗ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಹಾಜರಿದ್ದ ಬೀದಿದೀಪ ಸಿಎಂಸಿ ಉಸ್ತುವಾರಿ ಬಿರಾದಾರ ಪ್ರತಿಕ್ರಿಯಿಸಿ, ನಮಗೆ ನಗರಾಭಿವೃದ್ಧಿ ಕೋಶದಿಂದ ಮಂಜೂರಾದ ಸಂಖ್ಯೆಗಿಂತ ಹೆಚ್ಚು ಬೀದಿದೀಪ ಅಳವಡಿಸಿದ್ದೇವೆ. 3299 ದೀಪ ಮಂಜೂರಾಗಿದ್ದು, 3306 ದೀಪ ಅಳವಡಿಸಿದ್ದೇವೆ. ಉಳಿದ ದೀಪಗಳ ಮಂಜೂರಿ ದೊರೆತ ಕೂಡಲೇ ಬಾಕಿ ಅಳವಡಿಸುತ್ತೇವೆ ಎಂದರು.

ಸದಸ್ಯ ಸಂತೋಷ ನಾಯ್ಕ ಪ್ರತಿಕ್ರಿಯಿಸಿ, ಎಲ್ಲ ವಾರ್ಡ್​ಗಳಲ್ಲಿ ನೂರಾರು ದೀಪಗಳು ಕೆಟ್ಟಿವೆ. ಕಳೆದ ವರ್ಷ ಹೊಸ ದೀಪ ಅಳವಡಿಸುವಾಗ ಎಲ್ಲಿಯೇ ದೀಪ ಕೆಟ್ಟರೂ ನಮಗೆ ಸಂದೇಶ ಬರುತ್ತದೆ. ತಕ್ಷಣ ಅಲ್ಲಿ ದುರಸ್ತಿ ಮಾಡುತ್ತೇವೆ. ದೀಪಗಳಿಗೆ ಟೈಮರ್ ಅಳವಡಿಸಿದ್ದೇವೆ ಹೀಗಾಗಿ ಆನ್-ಆಫ್ ಅಗತ್ಯವಿಲ್ಲ ಎಂದಿದ್ದೀರಿ. ಈಗ ಕೆಲವೆಡೆ ದಿನವಿಡೀ ಸಾಲುಸಾಲು ದೀಪಗಳು ಉರಿಯುತ್ತವೆ. ಕೆಲವೆಡೆ ದೀಪ ಉರಿಯದೇ ಬಹಳಕಾಲವಾದರೂ ದುರಸ್ತಿಯಿಲ್ಲ ಎಂದರು.

ಮಳೆಗಾಲದ ಗಟಾರ, ಕಾಲುವೆ ಸ್ವಚ್ಛತೆಗೆ ಟೆಂಡರ್ ಕರೆದಿದ್ದರು. ಎಲ್ಲಯೂ ಕೆಲಸವಾಗಿಲ್ಲ. ಎಲ್ಲಿ ಸ್ವಚ್ಛತೆ ಮಾಡುತ್ತಾರೆ ಎಂಬುದೇ ಸದಸ್ಯರಿಗೆ ತಿಳಿಯುತ್ತಿಲ್ಲ ಎಂದು ಕಾಂತರಾಜ ನಾಯ್ಕ, ಎಂ.ಟಿ. ನಾಯ್ಕ ಇನ್ನಿತರ ಸದಸ್ಯರು ಸ್ವಚ್ಛತಾ ವಿಭಾಗದ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷೆ ಸುಮತಿ ಭಟ್ ಪ್ರತಿಕ್ರಿಯಿಸಿ, ಮಳೆಗಾಲ ಆರಂಭವಾಗಿದ್ದರಿಂದ ಎಲ್ಲೆಲ್ಲಿ ಮಳೆನೀರಿನ ಸಮಸ್ಯೆ ಉಂಟಾಗಿದೆಯೋ ಅಲ್ಲೆಲ್ಲಾ ಆದ್ಯತೆ ಮೇರೆಗೆ ಕೆಲಸ ಮಾಡಿದ್ದಾರೆ. ಎಲ್ಲ ವಾರ್ಡ್​ಗಳಲ್ಲೂ ಸ್ವಚ್ಛತೆ ಮಾಡಲಾಗುವುದು ಎಂದರು.

ಪುರಸಭೆಯಿಂದ 8 ಲೋಡ್ ಮಣ್ಣು ಭರಣಕ್ಕೆ 98 ಸಾವಿರ ರೂ. ಲೆಕ್ಕ ಬರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸಂತೋಷ ನಾಯ್ಕ ಹಾಗೂ ಇತರರು, ಒಂದು ಲೋಡ್ ಮಣ್ಣಿಗೆ 12,250 ರೂ.ಗಳೆಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಇದಕ್ಕೆ ಸಂಬಂಧಿಸಿದ ಫೈಲ್ ತರಿಸಿ ಪರಿಶೀಲಿಸುತ್ತೇನೆ ಎಂದರು. ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರು ಅನುಮೋದಿಸಿದ ಕೆಲಸಗಳನ್ನು ಮಾಡಿ ಎಂದು ಸದಸ್ಯ ಕಾಂತರಾಜ ಒತ್ತಾಯಿಸಿದರು.

ಉಳಿದಂತೆ ಸಭೆಯಲ್ಲಿ ಅಂಗಡಿಮಳಿಗೆಗಳ ಹರಾಜು ದರ ಮಂಜೂರಾತಿ, ವಿನ್ಯಾಸ ನಕ್ಷೆಗಳಿಗೆ ಅನುಮೋದನೆ, ಸಿಸಿ ಕೆಮರಾ ನಿರ್ವಹಣೆ ಮತ್ತು ಸಂಚಾರ ವ್ಯವಸ್ಥೆ ಹಾಗೂ ಮೀನುಗಾರಿಕೆ ಇಲಾಖೆಯವರು ಇತ್ತೀಚೆಗೆ ನಡೆಸಿದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರನ್ನು ಆಮಂತ್ರಣ ಪತ್ರಿಕೆಯಲ್ಲಿ ಕಡೆಗಣಿಸಿ, ಶಿಷ್ಟಾಚಾರ ಉಲ್ಲಂಘಿಸಿದ ವಿಚಾರ ಇನ್ನಿತರ ಸಂಗತಿಗಳು ಚರ್ಚೆಯಾದವು. ಉಪಾಧ್ಯಕ್ಷ ಮಹೇಶ ನಾಯ್ಕ, ಸಭಾನಾಯಕ ಸೂರ್ಯಕಾಂತ ಗೌಡ, ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ವ್ಯವಸ್ಥಾಪಕಿ ಅನಿತಾ ಶೆಟ್ಟಿ, ಸದಸ್ಯರು ಇನ್ನಿತರರು ಇದ್ದರು.