ಬಳ್ಳಾರಿ: ನಗರದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ಗೆ ಘೇರಾವ್ ಹಾಕಲು ಮುಂದಾಗಿದ್ದ ಅಖಂಡ ಜಿಲ್ಲೆ ಹೋರಾಟ ಸಮಿತಿ ಮುಖಂಡರನ್ನು ಪೊಲೀಸರು ಭಾನುವಾರ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಬಿಜೆಪಿಯಿಂದ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆನಂದ ಸಿಂಗ್ ಆಗಮಿಸಿದ್ದರು. ಅಲ್ಲಿಗೆ ತೆರಳುವ ಮುನ್ನ ಕನಕ ದುರ್ಗಮ್ಮ ದರ್ಶನ ಮಾಡಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೋರಾಟಗಾರರು ದೇವಸ್ಥಾನದ ಬಳಿ ಜಮಾಯಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಎಪಿಎಂಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಮಧ್ಯಾಹ್ನ ನಗರದಿಂದ ಆನಂದ ಸಿಂಗ್ ನಿರ್ಗಮಿಸಿದ ಬಳಿಕ ಹೋರಾಟಗಾರರನ್ನು ಪೊಲೀಸರು ಬಿಡುಗಡೆ ಮಾಡಿದರು.