ಭದ್ರಕೋಟೆಯಲ್ಲಿ ಕಂಗೊಳಿಸುವರೇ ಕೋಟ? -- ಸಾಧಿಸುವರೇ ಹೆಗ್ಡೆ ಗೆಲುವಿನ ಓಟ?
ಪ್ರಶಾಂತ ಭಾಗ್ವತ, ಉಡುಪಿ
ರಾಜ್ಯದಲ್ಲಿ ಏ.26ರಂದು ಮೊದಲ ಹಂತದ ಚುನಾವಣೆ ಮುಗಿದಿದ್ದು, ಈಗ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲೋರು ಯಾರು? ಸೋಲೋರು ಯಾರು ಎಂಬ ಚರ್ಚೆ ಎರಡೂ ಜಿಲ್ಲೆಯಲ್ಲಿ ನಡೆದಿದೆ.
ದಶಕದಿಂದ ಬಿಜೆಪಿ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಕಮಲ ಅರಳಿಸುತ್ತಾರೋ? ಅಥವಾ ಅನುಭವಿ ರಾಜಕಾರಣಿಯಾದ ಕೈ (ಕಾಂಗ್ರೆಸ್) ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆ ಅವರು ಬಿಜೆಪಿ ಕೋಟೆಯನ್ನು ಛಿದ್ರಗೊಳಿಸುತ್ತಾರೋ ಎಂಬ ಕುತೂಹಲ ಕರಾವಳಿ-ಮಲೆನಾಡಿನಲ್ಲಿ ಜನರ ಮನದಲ್ಲೀಗ ಕಾಡತೊಡಗಿದೆ.
ಈ ಮೊದಲು ವಿಧಾನಸಭೆ ಅಥವಾ ಲೋಕಸಭೆಗೆ ಸ್ಪರ್ಧಿಸಿದ ಅನುಭವ ಇಲ್ಲದ ಬಿಜೆಪಿ ಅಭ್ಯರ್ಥಿ ಕೋಟ ಪೂಜಾರಿ ಎದುರಿಸಿದ ಪ್ರಥಮ ಚುನಾವಣೆ ಇದು. ಗ್ರಾಪಂನಿಂದ ಸಂಸತ್ ಮೆಟ್ಟಿಲು ಏರಲು ಹೊರಟಿರುವ ಅಪರೂಪದ ರಾಜಕಾರಣಿ. ನೇರವಾಗಿ ಯಾವುದೇ ಚುನಾವಣೆ ಎದುರಿಸದಿದ್ದರೂ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡು, ಎರಡು ಇಲಾಖೆಗಳ ಸಚಿವರಾಗಿ ಉತ್ತಮ ಆಡಳಿತ ನಡೆಸಿದ ಹೆಗ್ಗಳಿಕೆ ಇವರ ಬೆನ್ನಿಗಿದೆ. ವಿಧಾನ ಪರಿಷತ್ನ ಪ್ರಸ್ತುತ ವಿರೋಧ ಪಕ್ಷದ ನಾಯಕನೂ ಆಗಿರುವ ಶ್ರೀನಿವಾಸ್ ಪೂಜಾರಿ, ಸಂಸತ್ ಚುನಾವಣೆಯ ಸತ್ವ ಪರೀಕ್ಷೆ ಬರೆದಿದ್ದು, ರಿಸಲ್ಟ್ಗೆ ಕಾಯುತ್ತಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2009ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ. ಸದಾನಂದ ಗೌಡ ಅವರ ವಿರುದ್ಧ ಕಾಂಗ್ರೆಸ್ನ ಕೆ.ಜಯಪ್ರಕಾಶ್ ಹೆಗ್ಡೆ ಸೋಲು ಕಂಡಿದ್ದರು. ಆದರೆ, 2012ರಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನದಲ್ಲಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರಿಂದ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ವಿ.ಸುನೀಲಕುಮಾರ್ ಅರನ್ನು ಸೋಲಿಸಿದ್ದರು. ಆದರೆ, 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಸೋಲನುಭವಿಸಿದ್ದರು. ಒಮ್ಮೆ ಗೆಲುವು, 2 ಬಾರಿ ಸೋಲು ಕಂಡಿರುವ ಹೆಗ್ಡೆ, ಈ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ.
ಗೆಲ್ಲೋರ್ಯಾರು? ಸೋಲೋರ್ಯಾರು ಎಂದು ತಿಳಿಯಲು ಫಲಿತಾಂಶದ ದಿನವಾದ ಜೂ.4ರ ವರೆಗೂ ಕಾಯಲೇಬೇಕು.
ಡಿ.ವಿ. ಸದಾನಂದ ಗೌಡ (ಬಿಜೆಪಿ)- 4,01,441 (ಶೇ.48.09)
ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)- 3,74,423 (ಶೇ.44.86)
ರಾಧಾ ಸುಂದರೇಶ್ (ಸಿಪಿಐ)- 24,991 (ಶೇ.2.99)
ಒಟ್ಟು ಮತದಾನ- 8,34,728 (ಶೇ.68.18)
ಗೆಲುವಿನ ಅಂತರ- 27,018 (ಶೇ.3.23)
ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)- 3,98,723 (ಶೇ.46.75)
ವಿ.ಸುನೀಲಕುಮಾರ್ (ಬಿಜೆಪಿ)- 3,52,999 (ಶೇ.41.39)
ಎಸ್.ಎಲ್. ಬೋಜೇಗೌಡ (ಜೆಡಿಎಸ್) -72,080 (ಶೇ.8.45)
ಒಟ್ಟು ಮತದಾನ- 8,52,824 (ಶೇ.68.06)
ಗೆಲುವಿನ ಅಂತರ- 45,724 (ಶೇ.5.36)
ಶೋಭಾ ಕರಂದ್ಲಾಜೆ (ಬಿಜೆಪಿ)- 5,81,168 (ಶೇ.56.20)
ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)- 3,99,525 (ಶೇ.38.63)
ವಿ.ಧನಂಜಯಕುಮಾರ್ (ಜೆಡಿಎಸ್)-14,895 (ಶೇ.1.44)
ಒಟ್ಟು ಮತದಾನ- 10,34,108 (ಶೇ.74.54)
ಗೆಲುವಿನ ಅಂತರ- 1,81,643 (ಶೇ.17.57).
ಶೋಭಾ ಕರಂದ್ಲಾಜೆ (ಬಿಜೆಪಿ)- 7,18,916 (ಶೇ.62.43)
ಪ್ರಮೋದ್ ಮಧ್ವರಾಜ್ (ಜೆಡಿಎಸ್)- 3,69,317 (ಶೇ.32.07)
ಪಿ.ಪರಮೇಶ್ವರ್ (ಬಿಎಸ್ಪಿ)-15,947 (ಶೇ.1.38)
ಒಟ್ಟು ಮತದಾನ- 11,51,623 (ಶೇ.76.07)
ಗೆಲುವಿನ ಅಂತರ- 3,49,599 (ಶೇ.30.37)
ಈ ಬಾರಿಯೂ ಮತದಾರರ ಒಲವು ಬಿಜೆಪಿ ಪರವೇ ಇದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಮಲ ಅರಳಲಿದೆ. ಮತದಾರರು ಭಾರತದ ಭವಿಷ್ಯ ರೂಪಿಸುವವರ ಪರವಾಗಿ ಸ್ವಯಂ ಪ್ರೇರಣೆಯಿಂದ ಹಕ್ಕು ಚಲಾಯಿಸಿದ್ದಾರೆ. ಹೀಗಾಗಿ ಪ್ರಜ್ಞಾವಂತ ಮತದಾರರು ನನ್ನ ಕೈ ಬಿಡಲಾರರು ಎಂಬ ಅಚಲ ನಂಬಿಕೆಯಿದೆ. ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತೇನೆ. ಕೋಟ ಶ್ರೀನಿವಾಸ್ ಪೂಜಾರಿ. ಬಿಜೆಪಿ ಅಭ್ಯರ್ಥಿ
ದಶಕದ ಬಳಿಕ ರಾಜ್ಯ-ದೇಶದಲ್ಲಿ ಕಾಂಗ್ರೆಸ್ ಪರವಾದ ಅಲೆ ಆರಂಭಗೊಂಡಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ನನ್ನ ಗೆಲುವಿಗೆ ಪೂರಕವಾದ ವಾತಾವರಣವಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಈ ಹಿಂದೆ ಸಂಸದನಾಗಿದ್ದಾಗ ಮಾಡಿರುವ ಕೆಲಸ ನನ್ನ ಕೈ ಹಿಡಿಯಲಿದೆ. ಅಲ್ಲದೆ, ಕ್ಷೇತ್ರದ ಜನರಿಗೆ ನನ್ನ ವ್ಯಕ್ತಿತ್ವ ಏನೆಂಬ ಅರಿವೂ ಸಹ ಇದ್ದು, ಗೆಲ್ಲುವ ವಿಶ್ವಾಸವಿದೆ. ಕೆ.ಜಯಪ್ರಕಾಶ ಹೆಗ್ಡೆ. ಕಾಂಗ್ರೆಸ್ ಅಭ್ಯರ್ಥಿ