ಕಾಂಗ್ರೆಸ್​ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ. 
ಜಿಲ್ಲೆ

ಜಯದ ಹಾರ ಕಮಲಕ್ಕೋ? ಹಸ್ತಕ್ಕೋ?

ಪ್ರಶಾಂತ ಜಿ. ಭಾಗ್ವತ

ಬ್ರಹ್ಮಗಿರಿಯಲ್ಲಿ ಭವಿಷ್ಯ ನಿರ್ಧಾರ | ಕೋಟ-ಹೆಗ್ಡೆ ಇಬ್ಬರಿಗೂ ಗೆಲ್ಲುವ ವಿಶ್ವಾಸ

ಪ್ರಶಾಂತ ಭಾಗ್ವತ, ಉಡುಪಿ
ದೇಶಾದ್ಯಂತ 7 ಹಂತಗಳಲ್ಲಿ ಸುದೀರ್ಘ 87 ದಿನಗಳ ಕಾಲ ಲೋಕಸಭಾ ಚುನಾವಣೆ ನಡೆದಿದ್ದು, ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. ಉಡುಪಿ ಬ್ರಹ್ಮಗಿರಿಯಲ್ಲಿರುವ ಸೇಂಟ್​ ಸಿಸಿಲಿ ಇಂಗ್ಲಿಷ್​ ಮೀಡಿಯಂ ಹೈಯರ್​ ಪ್ರೈಮರಿ ಸ್ಕೂಲ್​ನಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ಅನಾವರಣಗೊಳ್ಳಲಿದೆ.

ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ ಇಬ್ಬರೂ ಸಹ ಗೆಲುವು ನನ್ನದೇ ಎಂಬ ಅಚಲ ವಿಶ್ವಾಸ, ನಂಬಿಕೆ ವ್ಯಕ್ತಪಡಿಸಿದ್ದಾರೆ.

ಭದ್ರಕೋಟೆ ಏರುವರೇ ಕೋಟ?

ರಾಜ್ಯದಲ್ಲಿ ಏ.26ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿಯೇ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ. ಹೀಗಾಗಿ ತಿಂಗಳ ಕಾಲ (37 ದಿನ) ಈ ಎರಡೂ ಜಿಲ್ಲೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು ಎಂಬ ಚರ್ಚೆಯೂ ಸುದೀರ್ಘರ್ವಾಗಿಯೇ ನಡೆದಿದೆ. ಈ ಕ್ಷೇತ್ರ ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿದ್ದು, ಕೈಯಲ್ಲಿ ಕಮಲ ಹಿಡಿದು ಕೋಟ ಶ್ರೀನಿವಾಸ ಪೂಜಾರಿ ಕೋಟೆ ಏರುತ್ತಾರೆಯೇ ಎಂಬ ಕುತೂಹಲಕ್ಕೆ ಇಂದು ಮಧ್ಯಾಹ್ನ ತೆರೆ ಬೀಳಲಿದೆ.

ಟೇಬಲ್​ ಅಳವಡಿಕೆ ಹಾಗೂ ಭದ್ರತೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪರಿಶೀಲಿಸಿದರು.

ಇಂದು ಕುತೂಹಲಕ್ಕೆ ತೆರೆ

ಹಿಂದಿನ ಮೂರು ಚುನಾವಣೆಯಲ್ಲಿ ಒಮ್ಮೆ ಗೆಲುವು, ಎರಡು ಬಾರಿ ಸೋಲು ಕಂಡಿರುವ ಕಾಂಗ್ರೆಸ್​ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ ಈ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ. ಅನುಭವಿ ರಾಜಕಾರಣಿಯಾಗಿರುವ ಅವರು ಬಿಜೆಪಿಯ ಹ್ಯಾಟ್ರಿಕ್​ ಗೆಲುವಿಗೆ ಬ್ರೇಕ್​ ಹಾಕಿ, ಬಿಜೆಪಿ ಭದ್ರಕೋಟೆಯನ್ನು "ಕೈ'ವಶ ಮಾಡಿಕೊಳ್ಳುತ್ತಾರೆಯೇ ಎಂಬ ಕರಾವಳಿ-ಮಲೆನಾಡಿನ ಜನರ ಇನ್ನೊಂದು ಕುತೂಹಲಕ್ಕೂ ಇಂದಿನ ಫಲಿತಾಂಶ ತೆರೆ ಎಳೆಯಲಿದೆ.

ಒಟ್ಟು 135 ಸುತ್ತುಗಳಲ್ಲಿ ಮತ ಎಣಿಕೆ

ಕ್ಷೇತ್ರ ಮತಗಟ್ಟೆ ಟೇಬಲ್​ ಕೊಠಡಿ ಗರಿಷ್ಠ ಸುತ್ತು
ಕುಂದಾಪುರ 222 -- 14 -- 01 -- 16
ಉಡುಪಿ 226 -- 7+7 -- 02 -- 17
ಕಾಪು 209 -- 7+7 -- 02 -- 15
ಕಾರ್ಕಳ 209 -- 14 -- 01 -- 15
ಶೃಂಗೇರಿ 256 -- 14 -- 01 -- 19
ಮೂಡಿಗೆರೆ 231 -- 7+7 -- 02 -- 17
ಚಿಕ್ಕಮಗಳೂರು 261 -- 7+7 -- 02 -- 19
ತರೀಕೆರೆ 228 -- 14 -- 01 -- 17
ಒಟ್ಟು 1,842 -- 112 -- 12 -- 135

ಭದ್ರತೆಗೆ 700 ಪೊಲೀಸ್​ ಸಿಬ್ಬಂದಿ ನಿಯೋಜನೆ

ಮತ ಎಣಿಕೆ ಕೇಂದ್ರದ ಒಳಗೆ ಹಾಗೂ ಸುತ್ತ 400 ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ. ಇದಲ್ಲದೆ, ಇದಲ್ಲದೆ, 4 ಕೆಎಸ್​ಆರ್​ಪಿ, 5 ಡಿಎಆರ್​ ಬೀಡುಬಿಟ್ಟಿದೆ. ಜಿಲ್ಲೆಯ ವಿವಿಧ ಸೂಕ್ಷ್ಮ ಪ್ರದೇಶ, ಅಭ್ಯರ್ಥಿಗಳ ವಾಸ್ತವ್ಯದ ಮನೆ ಸೇರಿದಂತೆ ಇನ್ನಿತರ ಅಗತ್ಯತೆಯ ಪ್ರದೇಶಗಳಲ್ಲಿ 300ರಷ್ಟು ಸಿಬ್ಬಂದಿ ಭದ್ರತಾ ಕಾರ್ಯಗಳಿಗಾಗಿ ನೇಮಿಸಲಾಗಿದೆ. ಮತ ಎಣಿಕೆ ಕೇಂದ್ರದ ಹೊರಗೆ, ಒಳಗೆ ಹಾಗೂ ಟೇಬಲ್​ಗಳಿಗೂ ಸಹ ಕ್ಯಾಮರಾ ಅಳವಡಿಸಲಾಗಿದೆ. ಮೊದಲಿಗೆ ಪೋಸ್ಟ್​ಲ್​ ಬ್ಯಾಲೆಟ್​ಗಳ ಎಣಿಕೆ ನಡೆಯಲಿದೆ. ಮತಯಂತ್ರದಲ್ಲಿ ಎಣಿಕೆಯಾದ ಬಳಿಕ ಚಿಕ್ಕಮಗಳೂರು ಜಿಲ್ಲೆಯ 976 ಇವಿಎಂ ಸೇರಿ ಒಟ್ಟು 1,842 ಮತಯಂತ್ರಗಳನ್ನು ಮುಂದಿನ 45 ದಿನಗಳ ಕಾಲ ಡಿಸಿ ಕಚೇರಿಯ ಸ್ಟ್ರಾಂಗ್​ ರೂಮ್​ನಲ್ಲಿ ಕಾದಿಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠ ಡಾ.ಕೆ.ಅರುಣಕುಮಾರ್​ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಮತ ಎಣಿಕೆ ನಡೆಯಲಿರುವ ಉಡುಪಿಯ ಸೇಂಟ್​ ಸಿಸಿಲೀಸ್​ ಶಾಲೆಗೆ ಸರ್ಪಗಾವಲು ಹಾಕಿರುವ ಪೊಲೀಸರು.
ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬ ಜನರ ಆಶಯ, ಬೂತ್​ ಮಟ್ಟದ ಕಾರ್ಯಕರ್ತರ ಶ್ರಮ, ಸಚಿವನಾಗಿ ಮತ್ತು ವಿಪಕ್ಷದ ನಾಯಕನಾಗಿ ನಾನು ಮಾಡಿರುವ ಜನಪರ ಕೆಲಸ ಈ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಗೊಂಡು ನನ್ನ ಪತ್ತು ಪಕ್ಷದ ಗೆಲುವಿಗೆ ಖಂಡಿತ ಕಾರಣವಾಗುತ್ತದೆ. ಆ ನಂಬಿಕೆ ನನಗಿದ್ದು, ಗೆಲ್ಲುವ ಅಚಲ ವಿಶ್ವಾಸವಿದೆ. ಕೋಟ ಶ್ರೀನಿವಾಸ್​ ಪೂಜಾರಿ. ಬಿಜೆಪಿ ಅಭ್ಯರ್ಥಿ
ಚುನಾವಣೆ ಸಂದರ್ಭದಲ್ಲಿ ದಶಕದ ಬಳಿಕ ರಾಜ್ಯ-ದೇಶದಲ್ಲಿ ಕಾಂಗ್ರೆಸ್​ ಪರವಾದ ಅಲೆ ಇತ್ತು. ಇದೇ ವೇಳೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಈ ಹಿಂದೆ ನಾನು ಸಂಸದನಾಗಿದ್ದಾಗ ಮಾಡಿರುವ ಅನೇಕ ಜನಪರ ಕೆಲಸ ನನ್ನ ಕೈ ಹಿಡಿಯಲಿದ್ದು, ಖಂಡಿತ ಗೆಲ್ಲುವ ಭರವಸೆಯೇ ಇದೆ. ಕೆ.ಜಯಪ್ರಕಾಶ್​ ಹೆಗ್ಡೆ. ಕಾಂಗ್ರೆಸ್​ ಅಭ್ಯರ್ಥಿ