ಜಿಲ್ಲೆ

ಮನ್ಯಾಗ ಕುಂತ್ರ ಪಗಾರ ಯಾರು ಕೊಡತಾರ?

ವೀರೇಶ ಸೌದ್ರಿ

ಹಾನಗಲ್ಲ: ‘ದಿನಾಚರಣೆಗಳು, ಹಬ್ಬಗಳು ಬರತಾವು-ಹೊಕ್ಕಾವು. ಹೊಟ್ಟಿ ಪಡಿಪಾಟಲ, ಖರ್ಚು ನಿಲ್ಲಲ್ಲ. ದುಡೀದಿದ್ರ ಹೊಟ್ಟಿ ತುಂಬಲ್ಲ. ಕಾರ್ಮಿಕ ದಿನಾಚರಣೆ ಅಂತ ಮನ್ಯಾಗ ಕುಂತರ ಇವತ್ತಿನ ಪಗಾರ ಯಾರು ಕೊಡತಾರ?’ ಎಂದು ಕಾರ್ಮಿಕ ಮಹಮ್ಮದಹನೀಫ ಬಿಸ್ತಿ, ‘ಇವತ್ತೂ ಕೆಲಸ ಮಾಡೋದು ಅನಿವಾರ್ಯ ಐತಿ’ ಎಂದರು.

ಗುರುವಾರ ಕಾರ್ಮಿಕ ದಿನಾಚರಣೆ. ಪಟ್ಟಣದ ಹೊರ ಭಾಗದಲ್ಲಿರುವ ನವನಗರದ ಬಡಾವಣೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಒಂದು ದಿನಕ್ಕ 5 ನೂರರಿಂದ ಆರುನೂರು ಪಗಾರ ಸಿಗತೈತಿ. ಒಂದು ದಿನ ಮನ್ಯಾಗ ಕುಂತರ ಅಷ್ಟ ಪಗಾರ ಹೊಕ್ಕೇತಿ. ಕಾರ್ಮಿಕ ದಿನಾಚರಣೆ ಅಂತ ಯಾರೂ ನಮಗೇನ ಸನ್ಮಾನ ಮಾಡಿ, ಸಮಾರಂಭ ಮಾಡಿ ದುಡಿಯೋರಿಗೆ ಏನರ ಅನುಕೂಲ ಮಾಡತಾರ ಅಂದ್ರ ಅದು ಆಗುದಿಲ್ಲರಿ. ಮನ್ಯಾಗ ಕುಂತು ಖಾಲಿ ಹರಟಿ ಹೊಡಿಯೋದಕಿಂತ ದುಡಿಯೋದ ಲೇಸು’ ಎಂದು ಅನಿಸಿಕೆ ಹಂಚಿಕೊಂಡರು.

‘ಕಾರ್ಮಿಕರಲ್ಲದವರಿಗೆ ಸರ್ಕಾರದ ಕಾರ್ಮಿಕ ಇಲಾಖೆಯ ಸೌಲಭ್ಯ ಹೋಗುತ್ತಿದೆ. ಕೆಲಸ ಮಾಡುವವರಿಗೆ ಬಿಟ್ಟು ಮನ್ಯಾಗ ಇರೋರಿಗೆ ಸೌಲಭ್ಯ ಕೊಡತಾರು. ವ್ಯವಸ್ಥಾ ಎಲ್ಲ ಹದಗೆಟ್ಟೇತಿ. ದುಡಿದು ತಿನ್ನೋದನ್ನ ದೇವರು ನಮಗ ಕೊಟ್ಟಾನ. ಅಷ್ಟ ಮಾಡಿಕೊಂಡು ಜೀವನಾ ನಡಸತೇವಿ. ಇದನ್ನ ಯಾರೂ ಬದಲು ಮಾಡಾಕ ಆಗಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ದಿನಾಚರಣೆ ಹೆಸರಿಗಷ್ಟೇ ಎಂದ ಕಾರ್ಮಿಕ ಶಂಕರಣ್ಣ ಬಣಕಾರ, ‘ಬಿಸಿಲು, ಮಳಿ, ಚಳಿ ಎಲ್ಲಾನೂ ಎದುರಿಸಿ ದುಡಿದು ಬದುಕೋದೇ ನಿಜವಾದ ಜೀವನ’ ಎಂದರು.

ಕಾರ್ಮಿಕ ಕಾರ್ಡ್ ಇದ್ದವರಿಗೆ ಮದುವೆಗೆ, ಮೊದಲ ಹೆರಿಗೆಗೆ, ತಾಯಿ ಮಗುವಿಗೆ ಸಹಾಯಹಸ್ತ, ಮಕ್ಕಳಿಗೆ ಸ್ಕಾಲರಶಿಪ್, ಕಾರ್ಮಿಕ ಕಿಟ್, ಸ್ಕೂಲ್ ಬ್ಯಾಗ್, ಲ್ಯಾಪ್‌ಟಾಪ್ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ದೊರೆಯುತ್ತವೆ. ತಾಲೂಕಿನಲ್ಲಿ 6 ಸಾವಿರ ಕಾರ್ಮಿಕ ಕಾರ್ಡ್‌ದಾರರಿದ್ದಾರೆ ಎಂಬ ಮಾಹಿತಿಯಿದೆ. ತಾಲೂಕಿನಲ್ಲಿ 30 ಸಾವಿರ ಕಾರ್ಮಿಕ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಹೊಸ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ.