ಜಿಲ್ಲೆ

ಪಾಕ್ ಪರ ಘೋಷಣೆ ಕೂಗಿದ ಈ ಅಮೂಲ್ಯ ಲಿಯೋನಾ​ ಯಾರು?

Mysuru Rural

ಬೆಂಗಳೂರು: ಇಲ್ಲಿನ ಫ್ರೀಡಂ ಪಾರ್ಕಿನಲ್ಲಿ ಗುರುವಾರ ಹಿಂದೂ ಮುಸ್ಲಿಂ ಸಿಖ್ ಈಸಾಯಿ ಫೆಡರೇಷನ್ ಬೆಂಗಳೂರು ಸಂಘಟನೆ ಆಯೋಜಿಸಿದ್ದ ಸಿಎಎ ಮತ್ತು ಎನ್ಆರ್ ಸಿ ವಿರೋಧಿಸಿ ಸಮಾವೇಶದ ವೇದಿಕೆ ಮೇಲೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಯಾರು? ಆಕೆಯ ಹಿನ್ನೆಲೆ ಏನು ಎಂಬಿತ್ಯಾದಿ ವಿಚಾರಗಳು ಈಗ ಮುನ್ನೆಲೆ ಬಂದಿವೆ.

ಪಾಕ್ ಪರ ಘೋಷಣೆ ಕೂಗಿದ ಆಕೆಯ ಮನಸ್ಥಿತಿ ಎಂಥದ್ದು ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಒಳಗಾಗಿವೆ. ಅಂದ ಹಾಗೆ, ಈ ಅಮೂಲ್ಯ ಕೊಪ್ಪ ಮೂಲದವಳು. ಆಕೆಯ ತಂದೆ ವಾಜಿ. ಅವರೂ ಈಗ ಮಗಳ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಹೇಳಿದ್ದು ಕೇಳುತ್ತಿರಲಿಲ್ಲ ಎಂದಿದ್ದಾರೆ. ಆಕೆಯ ಫೇಸ್​ಬುಕ್ ಪುಟ ಜಾಲಾಡಿದರೆ ಫೆಬ್ರವರಿ 16ರಂದು ಹಾಕಿರುವ ಸ್ಟೇಟಸ್​ನಲ್ಲೂ ಹಲವು ದೇಶಗಳಿಗೆ ಜಿಂದಾಬಾದ್ ಹಾಕಿದ್ದಾಳೆ. ಅಲ್ಲದೇ, ಆರೆಸ್ಸೆಸ್​ ಮೇಲೆ ಕಿಡಿ ಕಾರಿದ್ದಳು.

ಅಮೂಲ್ಯ ನರೋನಾ ಎಂಬ ಫೇಸ್​ಬುಕ್ ಖಾತೆ ನೋಡಿದರೆ ಅದರ ತುಂಬಾ ಸಿಎಎ ವಿರೋಧಿ ಪ್ರತಿಭಟನೆಗಳ ವಿಚಾರಗಳು ಇತ್ತೀಚಿನ ಪೋಸ್ಟ್​ಗಳಲ್ಲಿ ತುಂಬಿವೆ. ಸಿಎಎ ಪ್ರತಿಭಟನೆ ಆಯೋಜಿಸುತ್ತಿರುವವರ ಜತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿರುವುದು ಪ್ರತಿಭಟನೆಯ ಪೋಸ್ಟರ್​ಗಳ ಮೂಲಕ ಬಹಿರಂಗವಾಗಿದೆ. ಫೆ.22ರಂದು ಉಡುಪಿ ಜಿಲ್ಲೆಯ ಬೆಳಪು ಪಂಚಾಯತ್ ಕ್ರೀಡಾಂಗಣದಲ್ಲಿ ಬೆಳಪು-ಮಲ್ಲಾರ್ ಮುಸ್ಲಿಂ ಸಂಘಟನೆ ಆಯೋಜಿಸಿರುವ ಪ್ರತಿಭಟನೆಯಲ್ಲೂ ಭಾಗಿಯಾಗುವ ವಿಷಯವೂ ಇದೆ.