ಪಾಂಡವಪುರ : ಪಾಂಡವಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಗರಾಭಿವೃದ್ಧಿ ಇಲಾಖೆ ಮೀಸಲು ನಿಗದಿ ಪಡಿಸಿ ಆದೇಶ ಹೊರಡಿಸಿರುವ ಪರಿಣಾಮ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಆಕಾಂಕ್ಷಿತರು ಅಧಿಕಾರದ ಗದ್ದುಗೆಗಾಗಿ ಈಗಾಗಲೇ ಪೈಪೋಟಿ ನಡೆಸುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಹಂಚಿಕೆ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿದ ಪರಿಣಾಮ ಒಂದೂವರೆ ವರ್ಷ ತಡವಾಗಿ ಎರಡನೇ ಅವಧಿ ಪ್ರಕಟವಾಗಿದ್ದು, ಪಾಂಡವಪುರ ಪುರಸಭೆ ಅಧ್ಯಕ್ಷಗಾದಿ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 17ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಜೆಡಿಎಸ್‌ನ ಅರ್ಚನಾ ಚಂದ್ರು ಅಧ್ಯಕ್ಷರಾಗಿ ಮತ್ತು 21ನೇ ವಾರ್ಡಿನ ಶ್ವೇತಾ ಉಮೇಶ್ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದರು.
ಒಟ್ಟು 23 ಸದಸ್ಯರ ಪುರಸಭೆಯಲ್ಲಿ ಜೆಡಿಎಸ್ 18 ಸದಸ್ಯರನ್ನು ಹೊಂದಿದ್ದು, ರೈತಸಂಘ-ಕಾಂಗ್ರೆಸ್ ಮೈತ್ರಿಕೂಟ 4 ಹಾಗೂ ಬಿಜೆಪಿಯ ಒಬ್ಬ ಸದಸ್ಯರು ಇದ್ದಾರೆ. ಸದಸ್ಯರ ಸಂಖ್ಯೆ ಬಲದ ಮೇಲೆ ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಆರು ಸದಸ್ಯರು ಪ್ರಬಲ ಆಕಾಂಕ್ಷಿಗಳಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿರುವ ಪರಿಣಾಮ ದೊಡ್ಡ ಮಟ್ಟದ ಪೈಪೋಟಿಯೇ ನಡೆಯುತ್ತಿದ್ದು, ಪಕ್ಷದ ನಾಯಕರಿಗೆ ತಮ್ಮನ್ನೆ ಆಯ್ಕೆ ಮಾಡುವಂತೆ ಬೆಂಬಲಿಗರ ಕಡೆಯಿಂದ ಒತ್ತಡ ಹಾಕಲಾಗುತ್ತಿದೆ.
ಆಕಾಂಕ್ಷಿತರ ಪಟ್ಟಿ : 14ನೇ ವಾರ್ಡಿನ ಸದಸ್ಯ ಸರಸ್ವತಿ ಜಯರಾಮು, 9ನೇ ವಾರ್ಡಿನ ಜ್ಯೋತಿಲಕ್ಷ್ಮೀ, 20ನೇ ವಾರ್ಡಿನ ಸುಧಾ ಜಯರಾಮು, 21 ನೇ ವಾರ್ಡಿನ ಶ್ವೇತಾ ಉಮೇಶ್, 22ನೇ ವಾರ್ಡಿನ ಮಂಗಳಮ್ಮ ಹಾಗೂ ಬಿಸಿಎಂ (ಎ) ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆಯಾಗಿರುವ ಸುನೀತಾ ಕದಿರೇಷನ್ ಅವರು ಅಧ್ಯಕ್ಷ ಗಾದಿಯ ಪ್ರಬಲ ಆಕಾಂಕ್ಷಿಗಳಾಗಿದ್ದು, ಈ ಪೈಕಿ ಸುನೀತಾ ಕದಿರೇಷನ್ ಹೊರತು ಪಡಿಸಿ ಉಳಿದೆಲ್ಲ ಸದಸ್ಯರು ಮೊದಲನೇ ಬಾರಿ ಪುರಸಭೆ ಪ್ರವೇಶಿಸಿದ್ದಾರೆ. ಆದರೆ ಸುನೀತಾ ಅವರು ಮೀಸಲು ಕ್ಷೇತ್ರದಿಂದ ಚುನಾಯಿತರಾಗಿರುವ ಪರಿಣಾಮ ಅಧ್ಯಕ್ಷಗಾದಿ ಒಲಿಯುವುದು ಸ್ವಲ್ಪ ಕಷ್ಟಕರವಾಗಿದೆ.
ಉಪಾಧ್ಯಕ್ಷ ಗಾದಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿರುವ ಕಾರಣ ಪುರುಷ ಸದಸ್ಯರ ಜತೆಗೆ ಮಹಿಳೆಯರ ಸದಸ್ಯರು ಕೂಡ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮೀಸಲು ಗೊಂದಲವವಿಲ್ಲದೇ ಸಂಪೂರ್ಣ ಎರಡೂವರೆ ವರ್ಷ ಅಧಿಕಾರ ಸಿಕ್ಕಿದ್ದರೆ ಅಧಿಕಾರ ಹಂಚಿಕೆ ಒಡಂಬಡಿಕೆ ಮೂಲಕ ಇಬ್ಬರು, ಮೂವರು ಅಧಿಕಾರ ಹಂಚಿಕೊಳ್ಳಬಹುದಾಗಿತ್ತು. ಆದರೆ ಈಗ ಇರುವುದು ಕೇವಲ 14 ತಿಂಗಳು ಅಧಿಕಾರ ಮಾತ್ರ ಹಂಚಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಅಧಿಕಾರ ಹಂಚಿಕೊಂಡರು ಇಬ್ಬರಿಗೆ ಏಳು ತಿಂಗಳುಗಳ ಕಾಲ ಕಾಲಾವಕಾಶ ಸಿಗುತ್ತದೆ. ಒಟ್ಟಾರೆ ತೀವ್ರ ಪೈಪೋಟಿ ಇರುವ ಅಧ್ಯಕ್ಷಗಾದಿ ಯಾರಿಗೆ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
2018 ಆಗಸ್ಟ್ 31 ರಂದು ಪುರಸಭೆಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಮೀಸಲಾತಿ ಗೊಂದಲದಿಂದ 2020 ಅಕ್ಟೋಬರ್ 23ರವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗದ ಕಾರಣ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗದೆ ಅಧಿಕಾರ ವಂಚಿತರಾಗಿ ನಾಮ್‌ಕೇ ವಾಸ್ತೆ ಸದಸ್ಯರಾಗಿದ್ದರು. ಎರಡು ವರ್ಷಗಳ ಬಳಿಕ ಸರ್ಕಾರ ಮೀಸಲಾತಿ ಪ್ರಕಟಿಸಿತು. ಅಲ್ಲಿಂದ ಐದು ವರ್ಷಗಳ ಕಾಲ ಅಂದರೆ 2025 ಅಗಸ್ಟ್ ವೇಳೆಗೆ ಪುರಸಭೆ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಸದ್ಯ ಸಾರ್ವಜನಿಕ ವಲಯದಲ್ಲಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಚರ್ಚೆ ಮತ್ತು ವಾದ ಶುರುವಾಗಿದೆ.