ಜಿಲ್ಲೆ

ಬೆಟಗೇರಿ ಬಸ್ ನಿಲ್ದಾಣದ ಗೋಳು ಕೇಳೋರು ಯಾರು?

ಶಿವಾನಂದ ಹಿರೇಮಠ ಗದಗ

ಅವಳಿ ನಗರದಲ್ಲಿ ಗದಗ ನಗರಕ್ಕಿಂತಲೂ ಬೆಟಗೇರಿ ಹಿಂದುಳಿದ ಪ್ರದೇಶವಾಗಿದೆ. ಶಾಸಕರು, ಸಂಸದರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಮರ್ಪಕ ಸಾರಿಗೆ ವ್ಯವಸ್ಥೆಯ ದೃಷ್ಟಿಯಿಂದ ರಸ್ತೆ ಇಕ್ಕೆಲಗಳಲ್ಲಿ ಒತ್ತುವರಿ ತೆರವು, ಬಸ್ ನಿಲ್ದಾಣ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ.

ನಗರದ ಪ್ರಮುಖ ನಿಲ್ದಾಣಗಳಲ್ಲಿ ಬೆಟಗೇರಿ ಮುಖ್ಯ ಬಸ್ ನಿಲ್ದಾಣವು ಒಂದು. ಆದರೆ, ಸ್ವಾತಂತ್ರೃಪೂರ್ವದ ಬಸ್ ನಿಲ್ದಾಣದಂತೆ ಸೊರಗಿದೆ. ಬೆಟಗೇರಿ ಮಾರ್ಗವಾಗಿ ಗದಗ, ರೋಣ, ಗಜೇಂದ್ರಗಡ, ಬಾದಾಮಿ ಬಸ್‌ಗಳು ಹಾಗೂ ಸಾವಿರಾರು ಪ್ರಯಾಣಿಕರು ನಿತ್ಯ ಸಂಚರಿಸುತ್ತಾರೆ. ಇಕ್ಕಟ್ಟಾದ ನಿಲ್ದಾಣದಲ್ಲಿ ಕನಿಷ್ಠ ಎರಡು ಬಸ್ ನಿಲ್ಲುವುದಕ್ಕೂ ಸ್ಥಳಾವಕಾಶ ಇಲ್ಲ. ಬಸ್‌ಗಳ ಹಿಮ್ಮುಖ ಸಂಚಾರವು ಸಾಧ್ಯವಿಲ್ಲ. ಸಂಚಾರ ಸಮಸ್ಯೆ ನಿತ್ಯದ ಗೋಳಾಗಿದೆ.

ಒತ್ತುವರಿ ತೆರವುಗೊಳಿಸಿ: ಬಸ್ ನಿಲ್ದಾಣದ ಇಕ್ಕೆಲಗಳಲ್ಲಿ ಮತ್ತು ಮುಂಭಾಗದ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳು ರಸ್ತೆಯನ್ನು ಅತಿಕ್ರಮಿಸಿದ್ದರಿಂದ, ರಸ್ತೆ ಮಾರ್ಗ ಚಿಕ್ಕದಾಗಿದೆ. ನಿಲ್ದಾಣದ ಮುಂಭಾಗದಲ್ಲಿ ಸಂಚಾರ ಅವ್ಯವಸ್ಥೆ ಸಾಮಾನ್ಯವಾಗಿದೆ. ಸಂಚಾರ ಠಾಣೆ ಪೊಲೀಸರು ಭದ್ರತೆ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿದ್ದರೂ ಸುಗಮ ಸಂಚಾರ ಸಾಧ್ಯವಾಗಿಲ್ಲ. ಪ್ರಯಾಣಿಕರು ರಸ್ತೆಯಲ್ಲೇ ನಿಲ್ಲುವ ಸ್ಥಿತಿಯಿದೆ. ನಿಲ್ದಾಣದ ಅಕ್ಕಪಕ್ಕ ಜೀವನೋಪಾಯಕ್ಕೆ ಜನರು ಗೂಡಂಗಡಿ ಇಟ್ಟಿರುವುದರಿಂದ ಅವರ ಸ್ಥಳಾಂತರವೂ ಕಷ್ಟಸಾಧ್ಯವಾಗಿದೆ. ನಿಲ್ದಾಣದಿಂದ ಅಂಗಡಿಗಳನ್ನು ತೆರವುಗೊಳಿಸಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ.

ಅವೈಜ್ಞಾನಿಕ ಪಾರ್ಕಿಂಗ್: ಅವೈಜ್ಞಾನಿಕ ಪಾರ್ಕಿಂಗ್ ಕೂಡ ಸಂಚಾರ ವ್ಯವಸ್ಥೆಯನ್ನು ಅಣಕಿಸುವಂತಿದೆ. ಪಕ್ಕದಲ್ಲೇ ಪೊಲೀಸ್ ಠಾಣೆ ಇದ್ದರೂ ಪಾರ್ಕಿಂಗ್, ಸುಗಮ ಸಂಚಾರ ಕೈಗೊಳ್ಳುತ್ತಿಲ್ಲ. ಹುಯಿಳಗೋಳ ಕ್ರಾಸಿಂಗ್ ರಸ್ತೆ, ಬೆಟಗೇರಿ ಪೊಲೀಸ್ ಠಾಣೆ ಮಾರ್ಗವಾಗಿ ಬೆಟಗೇರಿ ತರಕಾರಿ ಮಾರುಕಟ್ಟೆ ದಾಟುವ ವರೆಗೂ ಅವೈಜ್ಞಾನಿಕ ಪಾರ್ಕಿಂಗ್ 12ಗಂಟೆಯೂ ಕಾಣಸಿಗುತ್ತದೆ. ಕಾರು, ಬೈಕ್‌ಗಳನ್ನು ರಸ್ತೆಯಲ್ಲೇ ಪಾರ್ಕಿಂಗ್ ಮಾಡಿ, ಜನರು ಮಾರುಕಟ್ಟೆಗೆ ತೆರಳುತ್ತಾರೆ. ಇನ್ನೂ ಪ್ರತಿ ಭಾನುವಾರ ಬೆಟಗೇರಿ ತರಕಾರಿ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿರುತ್ತದೆ. ಇದು ದಿನನಿತ್ಯದ ಗೋಳು ಎಂಬಂತೆ ಪೊಲೀಸರು ಕೈಚೆಲ್ಲಿ ಕುಳಿತಿದ್ದಾರೆ.

ಸುಗಮ ಸಂಚಾರಕ್ಕೆ ‘ಸಪ್ತಸೂತ್ರ’ * ಬೆಟಗೇರಿ ನಿಲ್ದಾಣ ಬಳಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ * ಸಾಧ್ಯವಾದಷ್ಟು ನಿಲ್ದಾಣದ ಅಕ್ಕಪಕ್ಕದ ಒತ್ತುವರಿ ತೆರವು * ಬಸ್ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ, ಆಸನಗಳ ವ್ಯವಸ್ಥೆ * 3 ಬಸ್‌ಗಳ ಹಿಮ್ಮುಖ ಚಲನೆಗೆ ಅವಶ್ಯವಿರುವಷ್ಟು ಜಾಗ * ಸಾರಿಗೆ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು * ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಾಣ * ಗೂಡಂಗಡಿಗಳಿಂದ ಸಂಚಾರ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಬೆಟಗೇರಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಆದರೆ, ಅಭಿವೃದ್ಧಿ ಮಾಡಬೇಕಾದ ಅನಿವಾರ್ಯವೂ ಇದೆ. ಸಮಸ್ಯೆಗಳ ಬಗ್ಗೆ, ಪರಿಹಾರ ಸೂತ್ರದ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಸರಿಯಾದ ತೀರ್ಮಾನಕ್ಕೆ ಬರಲಾಗುವುದು. - ದೇವರಾಜು, ಕೆಎಸ್‌ಆರ್‌ಟಿ ಜಿಲ್ಲಾ ಅಧಿಕಾರಿ ಬೆಟಗೇರಿ ನಿಲ್ದಾಣ ಅಭಿವೃದ್ಧಿ ಬಗ್ಗೆ ಹತ್ತಾರು ವರ್ಷಗಳಿಂದ ಬೇಡಿಕೆ ಇದೆ. ಬೆಟಗೇರಿಯ ಹೃದಯಭಾಗದಲ್ಲಿ ನಿಲ್ದಾಣ ಇದೆ. ದಿನೇದಿನೆ ಜನಸಂಖ್ಯೆ ಬೆಳೆಯುತ್ತಿದ್ದು ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ. ನೀರಿನ ಸಮಸ್ಯೆ, ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಶೌಚಗೃಹ ಇಲ್ಲ. ರಾಘವೇಂದ್ರ ಯಳವತ್ತಿ, ನಗರಸ ಸಭೆ ಸದಸ್ಯ