ಜಿಲ್ಲೆ

ವೈಟ್‌ಟಾಪಿಂಗ್: ಲೋಕಾ ಅಧಿಕಾರಿಗಳಿಂದ ರಸ್ತೆ ಗುಣಮಟ್ಟ ಪರಿಶೀಲನೆ

ಬೆಂಗಳೂರು: ನಗರದ ಹಲಸೂರು ಕೆರೆಯ ಸಮೀಪದ ಕೆನ್ನಿಂಗ್ಟನ್ ಜಂಕ್ಷನ್ ಬಳಿ ಕುಸಿದಿದ್ದ ಪಾಲಿಕೆಯ ವೈಟ್ ಟಾಪಿಂಗ್ ರಸ್ತೆಯನ್ನು ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಪರಿಶೀಲನೆ ನಡೆಸಿದರು.

ಇತ್ತೀಚಿಗೆ ವೈಟ್ ಟಾಪಿಂಗ್ ರಸ್ತೆ ಕುಸಿತಕ್ಕೆ ಸಂಬಂಧಪಟ್ಟಂತೆ ಆಮ್ ಆದ್ಮಿ ಪಕ್ಷ ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು. ಇದನ್ನಾಧರಿಸಿ ಗುಂಡಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ಕಾರ್ಯಪಾಲಕ ಅಭಿಯಂತರ ನಿರಂಜನ್ ನೇತೃತ್ವದ ತಂಡವು ರಸ್ತೆ ಗುಣಮಟ್ಟದ ಪರಿಶೀಲನೆ ನಡೆಸಿತು.

ಸದರಿ ವೈಟ್ ಟಾಪಿಂಗ್ ರಸ್ತೆಯ ಒಂದು ಭಾಗದಲ್ಲಿ ತಾಂತ್ರಿಕ ಅಧಿಕಾರಿಗಲು ರಸ್ತೆಗೆ ರಂಧ್ರ ಮಾಡಿ ಅದರ ಗುಣಮಟ್ಟ ಅಳೆಯಲು ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿದರು. ಇವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅಂತಿಮ ವರದಿ ನೀಡುವ ಭರವಸೆಯನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್ ಮೋಹನ್, ನಮ್ಮ ದೂರಿಗೆ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗುಣಮಟ್ಟವನ್ನು ಪರಿಶೀಲನೆ ಮಾಡಿರುವುದು ಸ್ವಾಗತಾರ್ಹ. ಘಟನ ನಡೆದಾಗ ಪಾಲಿಕೆಯ ಮುಖ್ಯ ಇಂಜಿನಿಯರ್ ಪ್ರಹ್ಲಾದ್‌ರವರು ಹೇಳಿಕೆ ನೀಡಿ, ರಸ್ತೆ ಕೆಳಗಡೆ ಕೊಳವೆಮಾರ್ಗ ಹಾದುಹೋಗಿ ನೀರು ಸೋರಿಕೆಯಿಂದ ರಸ್ತೆ ಕುಸಿದಿದೆ ಎಂದಿದ್ದರು. ಆದರೆ, ಜಲಮಂಡಳಿ ಅಧಿಕಾರಿಗಳು ಅಂತಹ ಯಾವುದೇ ನೀರಿನ ಪೈಪ್‌ಲೇನ್ ಹಾದುಹೋಗಿಲ್ಲ ಎಂದಿದ್ದಾರೆ. ಇದನ್ನು ಗಮನಿಸಿದರೆ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯಿಂದ ಕಳಪೆ ಕೆಲಸ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.