ವಿದ್ಯಾಪೀಠ- ಶ್ರೀನಿವಾಸನಗರ ಮುಖ್ಯರಸ್ತೆಯಲ್ಲಿ ಪ್ರಗತಿಯಲ್ಲಿ ಕಾಮಗಾರಿ folder
ಜಿಲ್ಲೆ

ವೈಟ್‌ಟಾಪಿಂಗ್ ಆಮೆಗತಿ, ಜನರ ಪಾಡು ಅಧೋಗತಿ!

ಸದಾ ಜನ, ವಾಹನದಟ್ಟಣೆಯಿಂದ ಕೂಡಿರುತ್ತಿದ್ದ ವಿದ್ಯಾಪೀಠ- ಶ್ರೀನಿವಾಸನಗರದ 80 ಅಡಿ ಮುಖ್ಯರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವುದರಿಂದ ಸಾರ್ವಜನಿಕರು ನಿತ್ಯ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ.

ಕಿರುವಾರ ಎಸ್. ಸುದರ್ಶನ್ ಬೆಂಗಳೂರು

ಸದಾ ಜನ, ವಾಹನದಟ್ಟಣೆಯಿಂದ ಕೂಡಿರುತ್ತಿದ್ದ ವಿದ್ಯಾಪೀಠ- ಶ್ರೀನಿವಾಸನಗರದ 80 ಅಡಿ ಮುಖ್ಯರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವುದರಿಂದ ಸಾರ್ವಜನಿಕರು ನಿತ್ಯ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ದಕ್ಷಿಣ ಜಿಬಿಎ ವ್ಯಾಪ್ತಿಯ ಔಟರ್ ರಿಂಗ್ ರಸ್ತೆಯಿಂದ ವಿದ್ಯಾಪೀಠ, ಅಯ್ಯಪ್ಪ ದೇವಾಲಯ ಮಾರ್ಗವಾಗಿ ಶ್ರೀನಿವಾಸನಗರದ 2.4 ಕಿಮೀ ರಸ್ತೆಗೆ ವೈಟ್‌ಟಾಪಿಂಗ್, ಚರಂಡಿ ನಿರ್ಮಾಣ, ರಾಜಕಾಲುವೆಯ ಬಾಕಿ ಕಾಮಗಾರಿ, ುಟ್‌ಪಾತ್ ನಿರ್ಮಾಣ ಆರೇಳು ತಿಂಗಳಿಂದ ಪ್ರಗತಿಯಲ್ಲಿದೆ. ಕಾಲಮಿತಿಯೊಳಗೆ ಮುಗಿಯದೆ ಇರುವುದರಿಂದ ಸಾರ್ವಜನಿಕರ ಓಡಾಟ, ವಾಹನಸಂಚಾರ, ಮಳಿಗೆಗಳ ವಹಿವಾಟಿಗೆ ತೀವ್ರ ತೊಂದರೆ ಎದುರಾಗಿದೆ.

ವಿದ್ಯಾಪೀಠ, ಶ್ರೀನಿವಾಸನಗರ, ಬನಶಂಕರಿಗೆ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಂಡಿದೆ. ಮಾಹಿತಿ ಇಲ್ಲದವರು ಈ ರಸ್ತೆಯಲ್ಲಿ ಬಂದಾಗ ದಿಕ್ಕು ತೋಚದಂತಾಗುತ್ತಾರೆ. ಇಷ್ಟುದಿನ ತೊಂದರೆ ಅನುಭವಿಸಿದ್ದಾಯ್ತು, ಇನ್ನುಮುಂದಾದರೂ ಜಿಬಿಎ ಅಧಿಕಾರಿಗಳು ಗುತ್ತಿಗೆದಾರನ ಮೇಲೆ ಒತ್ತಡ ಹೇರಿ ಕೆಲಸ ತ್ವರಿತವಾಗಿ ಮುಗಿಸಿಕೊಡಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ರಸ್ತೆಯಲ್ಲಿ ಪೈಪ್‌ಲೈನ್ ಕೆಲಸ ಮುಗಿದಿದ್ದು, ವೈಟ್‌ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ರಾಜಕಾಲುವೆ ನಿರ್ಮಾಣವು ನನೆಗುದಿಗೆ ಬಿದ್ದಿರುವುದರಿಂದ ವೈಟ್‌ಟಾಪಿಂಗ್‌ಗೆ ಅಡ್ಡಿಯಾಗಿದೆ.

ತಿಂಗಳಲ್ಲಿ ಕೆಲಸ ಮುಗಿಸುವ ಗುರಿ

ಬ್ಯಾಂಕ್ ಕಾಲನಿ ಭಾಗದಲ್ಲಿನ ಕಾಮಗಾರಿಗೆ ಜಿಬಿಎಯಿಂದ ಅನುಮೋದನೆ ಸಿಕ್ಕಿದ್ದು ತಡವಾಯಿತು. ಹೀಗಾಗಿ ಕೆಲಸ ಸ್ವಲ್ಪ ತಡವಾಗಿದೆ. ಇನ್ನೊಂದು ತಿಂಗಳಲ್ಲಿ ಕೆಲಸ ಮುಗಿಸಲಾಗುವುದು. ವೈಟ್‌ಟಾಪಿಂಗ್ ಬಳಿಕ 20 ದಿನಕ್ಕೂ ಹೆಚ್ಚು ಕಾಲ ಕ್ಯೂರಿಂಗ್ ಅಗತ್ಯವಿದೆ ಎಂದು ಸೈಟ್ ಇಂಜಿನಿಯರ್ ಪೃಥ್ವಿ ತಿಳಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಕಲ್ಲು ಗಣಿ ಹಾಗೂ ಕ್ರಷರ್ ಮಾಲೀಕರು ಮುಷ್ಕರ ನಡೆಸಿದ್ದರಿಂದ ಸಕಾಲದಲ್ಲಿ ಜಲ್ಲಿ ಕಲ್ಲು, ಎಂ ಸಾೃಂಡ್ ದೊರೆಯಲಿಲ್ಲ. ಹೊರ ರಾಜ್ಯದಿಂದ ತರಿಸಲು ಹೆಚ್ಚು ದರ ಇದ್ದುದ್ದರಿಂದ ತೊಂದರೆ ಎದುರಾಗಿ ಬಿಸಿ ತಟ್ಟಿತು. ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಜಲ್ಲಿ, ಎಂ ಸ್ಯಾಂಡ್ ಸಿಕ್ಕಿದ್ದರಿಂದ ಈಗ ಕಾಮಗಾರಿಗೆ ವೇಗ ನೀಡಲಾಗಿದೆ ಎಂದಿದ್ದಾರೆ.

* ಮುಖ್ಯ ರಸ್ತೆಯಿಂದ ಬಡಾವಣೆಯ ಸಂಪರ್ಕ ರಸ್ತೆ ಬಂದು ಮಾಡಿರುವುದು.
6-7 ತಿಂಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಕತ್ತರಿಗುಪ್ಪೆಯಿಂದ ಕಾಲೇಜಿಗೆ ಹೋಗಬೇಕಾದರೆ ಸುತ್ತಿಬಳಸಿ ತೆರಳಬೇಕಿದೆ. ಇದರಿಂದ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಆಗುತ್ತಿಲ್ಲ. ಮುಖ್ಯರಸ್ತೆಯಿಂದ ಬಡಾವಣೆಯ ಸಂಪರ್ಕ ರಸ್ತೆಗಳನ್ನು ಮುಚ್ಚಿದ್ದಾರೆ. -ಪ್ರಜ್ವಲ್, ವಿದ್ಯಾರ್ಥಿ
ಬಡಾವಣೆಗೆ ಬಂದುಹೋಗಲು ಇದ್ದ ರಸ್ತೆಯನ್ನು ಬಂದ್ ಮಾಡಲಾಗಿದ್ದು, ತೀವ್ರ ತೊಂದರೆ ಎದುರಾಗುತ್ತಿದೆ. ಗುತ್ತಿಗೆದಾರರು ನಿಗದಿತ ಗಡುವಿನಲ್ಲಿ ಎಂದಿಗೂ ಕೆಲಸ ಮುಗಿಸುವುದಿಲ್ಲ. ಮಾಡುತ್ತಿರುವ ವ್ಯಾಪಾರದಲ್ಲಿ ಶೇ.50 ವಹಿವಾಟು ಕುಸಿದಿದೆ. -ಪಿ. ನಂಜುಡ, ಶ್ರೀನಿವಾಸನಗರ
ರಸ್ತೆ ಮುಚ್ಚಿರುವುದರಿಂದ ಅಂಗಡಿಗೆ ಬರುವವರ ಸಂಖ್ಯೆ ಕುಸಿದಿದ್ದು, ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ. ಇದರಿಂದ ಸುಧಾರಿಸಿಕೊಳ್ಳಲು ತಿಂಗಳುಗಳೇ ಬೇಕಾಗುತ್ತದೆ. -ಕೃಷ್ಣಮೂರ್ತಿ, ಅಂಗಡಿ ಮಾಲೀಕ