ವಿದ್ಯುತ್ ಸಮಸ್ಯೆಯ ಬಗ್ಗೆ ಬಿಳುಗುಂದ ಗ್ರಾಮಸ್ಥರು ಮಾಹಿತಿ ನೀಡಿದರು. ಎಚ್.ಕೆ.ಭೀಮಣಿ, ಚೆಂಗಪ್ಪ, ಸಂಪತ್ ದೇವಯ್ಯ, ಅರುಣ ಗಣಪತಿ, ರಾಜ ತಿಮ್ಮಯ್ಯ ಇದ್ದರು. 
ಜಿಲ್ಲೆ

ವಿದ್ಯುತ್ ಸ್ಥಗಿತದಿಂದ ಕಗ್ಗತ್ತಲಲ್ಲಿ ಬಿಳುಗುಂದ

ವಿರಾಜಪೇಟೆ: ಸುಮಾರು 20 ವರ್ಷಗಳ ಹಿಂದೆ ಅಳವಡಿಸಿದ್ದ ಬೀದಿ ದೀಪ, ವಿದ್ಯುತ್ ಕಂಬ, ತಂತಿಗಳನ್ನು ಸೆಸ್ಕ್ ಏಕಾಏಕಿ ತೆರವುಗೊಳಿಸಿ ಕಗ್ಗತ್ತಲಿನಲ್ಲಿ ವಾಸಿಸುವಂತೆ ಮಾಡಿದ್ದಾರೆ ಎಂದು ಬಿಳುಗುಂದ ಗ್ರಾಮಸ್ಥರು ಆರೋಪಿಸಿದ್ದಾರೆ.

ವಿರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರಾಟ್ ಅಯ್ಯಪ್ಪ ದೇವಾಲಯದ ದೇವರ ಕಾಡು, ದಲಿತರ ಕಾಲನಿಗೆ ತೆರಳುವ ಮುಖ್ಯರಸ್ತೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕೊಡವ ಸಮಾಜ ಹಾಗೂ ಗ್ರಾಮ ಪಂಚಾಯಿತಿಗೆ ತೆರಳುವ ಮುಖ್ಯರಸ್ತೆಯ ಭಾಗಗಳಲ್ಲಿ ವಾಸ ಮಾಡುವ ಸುಮಾರು 45-50 ಮನೆ ವಾಸಿಗಳಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಇಲ್ಲಿ ವೋಲ್ಟೇಜ್ ಸಮಸ್ಯೆ, ಬೀದಿ ದೀಪ ಇಲ್ಲದಿರುವುದರಿಂದ ಕಳ್ಳರ ಸಮಸ್ಯೆ, ದೇವಕಾಡು ಭಾಗದಲ್ಲಿ ಪುಂಡರ ಅನೈತಿಕ ಚಟುವಟಿಕೆ ಸೇರಿಂದತೆ ಗಾಂಜಾ ವ್ಯಸನಿಗಳ ಕಾಟ ಎದುರಾಗಿದೆ ಎಂದು ದೂರಿದರು.

ಕುಗ್ರಾಮ ಸುಗ್ರಾಮ ಯೋಜನೆಯಡಿ 2005ರಲ್ಲಿ ಸರ್ಕಾರ ವಿದ್ಯುತ್ ಕಂಬಗಳನ್ನು ಅಳವಡಿಸಿ ಬೀದಿ ದೀಪ ಅಳವಡಿಸಿತ್ತು. ನಂತರದಲ್ಲಿ ಇಲಾಖೆ ಮನೆಗಳ ಸಂಖ್ಯೆ ವಿರಳ ಎಂದು ಪರಿಗಣಿಸಿ ಬೀದಿ ದೀಪ ಸೇರಿದಂತೆ ಕಂಬ ಹಾಗೂ ತಂತಿಯನ್ನು ತೆರವುಗೊಳಿಸಿದ್ದಾರೆ. ಸುಮಾರು 20 ವರ್ಷಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದೇವೆ. ಸೆಸ್ಕ್‌ಗೆ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿದರೂ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಕೊಡವ ಸಮಾಜದ ಕಾರ್ಯದರ್ಶಿ ಅಲ್ಲಪ್ಪಿರ ಎಂ. ಕಾರ್ಯಪ್ಪ ಆರೋಪಿಸಿದರು.

ಸಮಸ್ಯೆ ಪರಿಹಾರಕ್ಕೆ ಸೆಸ್ಕ್‌ಗೆ ಒಂದು ತಿಂಗಳ ಗಡುವು ನೀಡಲಾಗುವುದು. ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಸೆಸ್ಕ್ ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಬಿಳುಗುಂದ ಗ್ರಾಮದ ರಾಜ ತಿಮ್ಮಯ್ಯ, ಮೂಕಂಡ ಅರುಣ ಗಣಪತಿ, ಕಾರ್ಮಿಕ ಮುಖಂಡರಾದ ಎಚ್.ಕೆ.ಭೀಮಣಿ, ಮಾಜಿ ಸೈನಿಕರಾದ ನೆಲ್ಲಚಂಡ ಚೆಂಗಪ್ಪ, ಮೂಕಂಡ ಸಂಪತ್ ದೇವಯ್ಯ ಇತರರು ಇದ್ದರು.

ವಿರಾಜಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ತ್ರೀಫೇಸ್ ವಿದ್ಯುತ್ ತಂತಿಗಳ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಭಾಗದಲ್ಲಿ ಎಲ್.ಟಿ. ಲೈನ್ ಕಡಿತಗೊಳಿಸಲಾಗಿದೆ. ಸೆಸ್ಕ್ ಹೊಸದಾಗಿ ಲೈನ್ ಬಳಸಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಗ್ರಾಮ ಪಂಚಾಯಿತಿಯಿಂದ ವಿದ್ಯುತ್ ದೀಪ ಅಳವಡಿಸಬಹುದಾಗಿದೆ. ವೋಲ್ಟೆಜ್ ಸಮಸ್ಯೆಗೆ ಹೊಸದಾಗಿ ಪರಿವರ್ತಕ ಅಳವಡಿಸಿದಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಗ್ರಾಮದ ಸಮಸ್ಯೆ ಬಗ್ಗೆ ಸಿಬ್ಬಂದಿಯಿಂದ ವರದಿ ಪಡೆದು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇವೆ. ಪಿ.ಎಸ್. ಸುರೇಶ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸೆಸ್ಕ್