ಜಿಲ್ಲೆ

ಆನ್​ಲೈನ್​ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!

Webdesk - Ravikanth

ಶಿವಮೊಗ್ಗ: ಆನ್​​ಲೈನ್​ ಮೂಲಕ ಗೋಣಿ ಚೀಲ‌ ಖರೀದಿಸಲು ಹೋಗಿ ಶಿಕ್ಷಕಿಯೊಬ್ಬರು ಬರೋಬ್ಬರಿ 1.13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಶಿಕಾರಿಪುರದ ಶಿಕ್ಷಕಿಯೊಬ್ಬರು ಹೀಗೆ ಮೋಸ ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಖಾಲಿ ಗೋಣಿಚೀಲ ಖರೀದಿಗಾಗಿ ಗೂಗಲ್​ನಲ್ಲಿ ಹುಡುಕಾಟ ‌ನಡೆಸಿದ ಈ ಶಿಕ್ಷಕಿಗೆ ಆನ್​ಲೈನ್​ ಟ್ರೇಡಿಂಗ್ ವೆಬ್​ಸೈಟ್​ ಸಿಕ್ಕಿದೆ. ಇವರು ಅದಕ್ಕೆ ಇ-ಮೇಲ್ ಕೂಡ ಮಾಡಿದ್ದರು. ಏಪ್ರಿಲ್​ 11ರಂದು ಆ ಇ-ಮೇಲ್​ಗೆ ಪ್ರತಿಕ್ರಿಯೆ ಬಂದಿತ್ತು. ಇ ಮೇಲ್ ಸಂದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದ. ಆತ ವಾಟ್ಸ್​ಆ್ಯಪ್​ ನಂಬರ್ ಪಡೆದಿದ್ದು, ಬಳಿಕ ಇಬ್ಬರೂ ವಾಟ್ಸ್​ಆ್ಯಪ್​ ಮೂಲಕ ವ್ಯವಹಾರದ ಬಗ್ಗೆ ಚರ್ಚಿಸಿದ್ದರು.

26 ಟನ್ ಖಾಲಿ ಚೀಲ ಬೇಕಿದೆ ಎಂದು ಶಿಕ್ಷಕಿ ಹೇಳಿದ್ದಕ್ಕೆ ಆತ, ಖಾಲಿ ಚೀಲಗಳ ಖರೀದಿಗೆ ಅರ್ಧದಷ್ಟು ಹಣವನ್ನು ಮುಂಗಡವಾಗಿ ಕಳುಹಿಸುವಂತೆ ಸೂಚಿಸಿದ್ದ. ಅದರಂತೆ ದೆಹಲಿಯ ಬ್ಯಾಂಕ್ ಖಾತೆಯೊಂದಕ್ಕೆ 1,13,720 ರೂಪಾಯಿ ಆನ್​ಲೈನ್ ಮೂಲಕ ಶಿಕ್ಷಕಿ ಜಮೆ ಮಾಡಿದ್ದರು. ಆನಂತರ ಆತ ವಾಹನದ ಸಾಗಾಣಿಕೆ ವೆಚ್ಚವಾಗಿ ಮತ್ತಷ್ಟು ಹಣ ಸಂದಾಯ ಮಾಡುವಂತೆ ಸೂಚಿಸಿದ್ದು ಅನುಮಾನಗೊಂಡ ಶಿಕ್ಷಕಿ ಶಿವಮೊಗ್ಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.