ಗಜೇಂದ್ರಗಡ: ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು ಹಾಗೂ ಪಟ್ಟಣದ ಪ್ರಮುಖ ಬಡಾವಣೆಗಳ ರಸ್ತೆಗಳು ಹದಗೆಟ್ಟು ಜನರು ಪರದಾಡುವಂತಾಗಿದೆ.
ತಾಲೂಕಿನ ರಾಜೂರು- ಕೊಡಗಾನೂರವರೆಗೆ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ ಡಾಂಬರ್ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿದೆ. ಚಿಲಝರಿ ಗ್ರಾಮದಿಂದ ಪಟ್ಟಣದ 23ನೇ ವಾರ್ಡ್ ಉಣಚಗೇರಿವರೆಗೆ 2021-22ರಲ್ಲಿ ಜಿಪಂ ವತಿಯಿಂದ ನಿರ್ಮಿಸಿದ ರಸ್ತೆ ಕಾಮಗಾರಿ ಕಳಪೆ ಆದ ಪರಿಣಾಮ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಸೂಡಿ ಗ್ರಾಮದಿಂದ ಗುಳಗುಳಿಗೆ ಹೋಗುವ ರಸ್ತೆ ಭಾರಿ ವಾಹನಗಳಿಂದ ಸಂಪೂರ್ಣವಾಗಿ ಹಾಳಾಗಿದೆ. ಕುಂಟೋಜಿಯಿಂದ ವದೇಗೋಳಕ್ಕೆ ತೆರಳುವ ರಸ್ತೆ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದೆ.
ಗಜೇಂದ್ರಗಡದ ರೇಣುಕಾಚಾರ್ಯರ ಮಠದಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ಸಂಕನೂರ ಕ್ರಾಸ್‌ನವರೆಗೆ ಗದಗ ರಸ್ತೆ ಬೃಹತ್ ಗುಂಡಿಗಳಿಂದ ಕೂಡಿದೆ. ಬೈಕ್, ಬಸ್, ಇತರ ನೂರಾರು ವಾಹನಗಳು ಬಿದ್ದಿವೆ. ಅನೇಕರು ಗಾಯಗೊಂಡಿದ್ದಾರೆ. ಹಲವರು ಮರಣ ಹೊಂದಿದ್ದಾರೆ. ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ 4 ಕಿ.ಮೀ. ರಸ್ತೆ ಸುಧಾರಣೆಯಾಗಿದೆ. ಆದರೆ, ತಾಲೂಕಿನ ವ್ಯಾಪ್ತಿಯ 5 ಕಿ.ಮೀ. ರಸ್ತೆ ಸ್ಥಿತಿ ದಶಕಗಳಿಂದಲೂ ಸುಧಾರಿಸಿಲ್ಲ. ಗಜೇಂದ್ರಗಡ ಪಟ್ಟಣಕ್ಕೆ ಪ್ರಭಾವಿ ರಾಜಕಾರಣಿಗಳು ಬರುತ್ತಾರೆ ಎಂದರೆ ರಸ್ತೆಗೆ ತೇಪೆ ಹಚ್ಚುವ ಕಾರ್ಯ ಸುಮಾರು ಹತ್ತು ವರ್ಷಗಳಿಂದಲೂ ನಡೆದಿದೆ. 10 ವರ್ಷಗಳಿಂದ ಗುಂಡಿ ಮುಚ್ಚುವ ಕಾರ್ಯಕ್ಕೆ ಬಳಸಿದ ಹಣದಲ್ಲಿ ತ್ತಮವಾದ ರಸ್ತೆ ಮಾಡಬಹುದಿತ್ತು ಎಂಬುದು ವಾಹನ ಸವಾರರ ಮಾತು.
ರಸ್ತೆಯಿಲ್ಲದ ಬಡಾವಣೆಗಳು: ಪಟ್ಟಣದಲ್ಲಿ 30 ವರ್ಷಗಳಿಂದ ಹೊನವಾಡ ಪ್ಲಾಟ್, ಕಡ್ಡಿ ಅವರ ಪ್ಲಾಟ್‌ನಲ್ಲಿ ರಸ್ತೆ ನಿರ್ಮಿಸದಿರುವುದು ಪುರಸಭೆ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಮಳೆಯಾಯಿತು ಎಂದರೆ ಇಲ್ಲಿ ಯಾವುದೇ ವಾಹನಗಳು ಒಳಬರಲು ರಸ್ತೆಗಳಿರಲ್ಲ. ಮಣ್ಣಿನ ರಸ್ತೆಗಳ ಗುಂಡಿಗಳಲ್ಲಿ ನಿಂತ ನೀರಿನಿಂದ ಸೊಳ್ಳೆ ಕಾಟ ಹೆಚ್ಚಾಗಿದೆ.
ಕಳೆದ 30 ವರ್ಷಗಳಿಂದ ಕಡ್ಡಿಯವರ ಪ್ಲಾಟ್‌ನಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ರಸ್ತೆ, ಚರಂಡಿ ಇರದೇ ನರಕಯಾತನೆ ಅನುಭವಿಸುತ್ತಿದ್ದೇವೆ. ರಸ್ತೆ ನಿರ್ಮಿಸಲು ಪುರಸಭೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿ, ಶಾಸಕರಿಗೆ ನಿವಾಸಿಗಳು ಮನವಿ ಮಾಡುತ್ತ ಬಂದರೂ, ಸ್ಪಂದನೆ ಸಿಕ್ಕಿಲ್ಲ. ಪ್ರವೀಣ ಹಿರೇಮಠ, ಕಡ್ಡಿಯವರ ಪ್ಲಾಟ್ ನಿವಾಸಿ ಪಟ್ಟಣದ ಕೆಲ ಬಡಾವಣೆಗಳು ಹಾಗೂ ತಾಲೂಕಿನ ಗ್ರಾಮೀಣ ಭಾಗಗಳಿಗೆ ಸಂಪರ್ಕಿಸುವ ರಸ್ತೆಗಳು ಅಲ್ಲಲ್ಲಿ ಹಾಳಾಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗದಗ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾರ್ಯ ಕೈಬಿಟ್ಟು ಶಾಶ್ವತವಾಗಿ ಇರುವಂತೆ ನೂತನ ರಸ್ತೆ ನಿರ್ಮಾಣ ಮಾಡಬೇಕಿದೆ. ಬಸವರಾಜ ಹೂಗಾರ, ಕರವೇ ತಾಲೂಕಾಧ್ಯಕ್ಷ ಪಟ್ಟಣದ ಕಡ್ಡಿಯವರ ಪ್ಲಾಟ್ ಹಾಗೂ ಹೊನವಾಡ ಪ್ಲಾಟ್‌ನಲ್ಲಿ ರಸ್ತೆ, ಚರಂಡಿ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ. ಅನುದಾನ ಬಂದ ತಕ್ಷಣ ನಿರ್ಮಾಣಕ್ಕೆ ಮುಂದಾಗುತ್ತೇವೆ. ಸುಭಾಸ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಗಜೇಂದ್ರಗಡ